ಬೆಂಗಳೂರು: ಈಗಾಗಲೇ ರಾಜ್ಯದ ಶೇಕಡ 50ಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಮುಂದಿನ ವರ್ಷ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಜೀರುಂಡೆ ಪುಸ್ತಕ ಪ್ರಕಾಶನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕಂಚ ಐಲಯ್ಯ ಅವರ ಶೂದ್ರ ಬಂಡಾಯ ಕನ್ನಡ ಅನುವಾದ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪರಿಚಯಿಸಿದಾಗ ತಮ್ಮ ವಿರುದ್ಧ ಟೀಕೆಗಳು ಕೇಳಿಬಂದವು. ಆದರೆ ದ್ವಿಭಾಷಾ ಶಿಕ್ಷಣ ನೀತಿಯ ಪರವಾಗಿ ನಾವಿದ್ದೇವೆ. ಮಕ್ಕಳ ಶಿಕ್ಷಣ ಮಾಧ್ಯಮವನ್ನು ಆಯ್ಕೆ ಮಾಡುವ ಹಕ್ಕು ಪೋಷಕರಿಗೆ ಇರಬೇಕು ಎಂದು ಹೇಳಿದ್ದಾರೆ.
ಸಮಾಜದಲ್ಲಿ ಸಮಾನತೆ ತರಲು ಶಿಕ್ಷಣವೇ ಪ್ರಬಲ ಅಸ್ತ್ರವಾಗಿದೆ. ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ. ಶೂದ್ರ ಬಂಡಾಯ ದಂತಹ ಕೃತಿಗಳು ಓದುಗರಲ್ಲಿ ವೈಚಾರಿಕ ಕ್ರಾಂತಿಯನ್ನು ಮೂಡಿಸುತ್ತದೆ. ಇಂತಹ ಸಾಮಾಜಿಕ ಕಳಕಳಿಯ ಕೃತಿಗಳು ನಮ್ಮ ಆಲೋಚನೆಗಳಿಗೆ ಬಲ ತರುತ್ತವೆ ಎಂದು ಹೇಳಿದ್ದಾರೆ.

