ಭಾರತದಲ್ಲಿ ಇಂದು ನಮ್ಮ ಜೇಬಿನಲ್ಲಿರುವ ಅತೀ ದೊಡ್ಡ ನೋಟು ಅಂದರೆ ಅದು 500 ರೂಪಾಯಿ. ಒಂದು ಕಾಲದಲ್ಲಿ ಮೆರೆದಿದ್ದ 2,000 ಮತ್ತು 1,000 ರೂಪಾಯಿ ನೋಟುಗಳು ಈಗ ಇತಿಹಾಸದ ಪುಟ ಸೇರಿವೆ. ಆದರೆ, ಜಗತ್ತಿನ ಯಾವುದೋ ಮೂಲೆಯಲ್ಲಿ ಒಂದು ಕೋಟಿ ಮುಖಬೆಲೆಯ ನೋಟು ಚಲಾವಣೆಯಲ್ಲಿದೆ ಎಂದರೆ ನೀವು ನಂಬುತ್ತೀರಾ? ಹೌದು, ಕೇಳಲು ಅಚ್ಚರಿಯಾದರೂ ಇದು ನಿಜ
ಆದರೆ ಅಸಲಿ ಟ್ವಿಸ್ಟ್ ಇಲ್ಲಿದೆ ಆ ಒಂದು ಕೋಟಿ ಬೆಲೆಯ ನೋಟನ್ನು ಹಿಡಿದು ನೀವು ಭಾರತಕ್ಕೆ ಬಂದರೆ, ಅದರ ಮೌಲ್ಯ ಕೇವಲ 650 ರೂಪಾಯಿ ಮಾತ್ರ ಏನಿದು ವಿಚಿತ್ರ? ಆ ದೇಶ ಯಾವುದು? ಇಲ್ಲಿದೆ ಪೂರ್ಣ ಮಾಹಿತಿ.
ವಿಶ್ವದ ದೊಡ್ಡ ನೋಟು ಯಾವ ದೇಶದ್ದು?
ಪ್ರಸ್ತುತ ವಿಶ್ವದಲ್ಲೇ ಅತಿ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಹೊಂದಿರುವ ದೇಶಗಳೆಂದರೆ ಇರಾನ್ ಮತ್ತು ವೆನೆಜುವೆಲಾ.
ಇರಾನ್: ಇಲ್ಲಿ 10 ಮಿಲಿಯನ್ (1 ಕೋಟಿ) ರಿಯಾಲ್ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿವೆ. ಇದು ಸದ್ಯಕ್ಕೆ ವಿಶ್ವದ ಅತಿ ದೊಡ್ಡ ಮುಖಬೆಲೆಯ ನೋಟು ಎಂದು ಗುರುತಿಸಿಕೊಂಡಿದೆ.
ವೆನೆಜುವೆಲಾ: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಈ ದೇಶ ಕೂಡ 1 ಮಿಲಿಯನ್ ಬೊಲಿವರ್‌ವರೆಗಿನ ನೋಟುಗಳನ್ನು ಬಿಡುಗಡೆ ಮಾಡಿದೆ.
ಮುಖಬೆಲೆ ಕೋಟಿ ಮೌಲ್ಯ ಮಾತ್ರ ಪುಡಿಗಾಸು
ನೋಟಿನ ಮೇಲೆ ‘ಒಂದು ಕೋಟಿ’ ಎಂದು ಬರೆದಿದ್ದರೂ, ಅದರ ಖರೀದಿ ಸಾಮರ್ಥ್ಯ ಮಾತ್ರ ತೀರಾ ಕಡಿಮೆ. ಇರಾನ್‌ನ ಈ 10 ಮಿಲಿಯನ್ ರಿಯಾಲ್ ನೋಟನ್ನು ಭಾರತೀಯ ರೂಪಾಯಿಗೆ ಕನ್ವರ್ಟ್ ಮಾಡಿದರೆ ನಿಮಗೆ ಸಿಗುವುದು ಕೇವಲ ₹650 ಅಷ್ಟೇ! ಅಂದರೆ, ಅಲ್ಲಿನ ಕೋಟ್ಯಧಿಪತಿ ಭಾರತಕ್ಕೆ ಬಂದರೆ ಕೇವಲ ಒಂದು ಸಾಧಾರಣ ಹೋಟೆಲ್ ಬಿಲ್ ಕಟ್ಟುವಷ್ಟು ಹಣವನ್ನಷ್ಟೇ ಹೊಂದಿರುತ್ತಾರೆ.
ನೋಟಿನ ಬೆಲೆ ಇಷ್ಟೊಂದು ಕುಸಿಯಲು ಕಾರಣವೇನು?
ಬೆಲೆ ಏರಿಕೆ: ದೇಶದಲ್ಲಿ ವಸ್ತುಗಳ ಬೆಲೆ ವಿಪರೀತವಾಗಿ ಏರಿದಾಗ, ಸಣ್ಣ ನೋಟುಗಳಿಂದ ವ್ಯಾಪಾರ ಮಾಡುವುದು ಅಸಾಧ್ಯವಾಗುತ್ತದೆ.
ಕರೆನ್ಸಿ ಮೌಲ್ಯ ಕುಸಿತ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆ ದೇಶದ ಹಣದ ಬೆಲೆ ಕುಸಿದಾಗ, ಸರ್ಕಾರ ಅನಿವಾರ್ಯವಾಗಿ ದೊಡ್ಡ ಮುಖಬೆಲೆಯ ನೋಟುಗಳನ್ನು ಮುದ್ರಿಸಬೇಕಾಗುತ್ತದೆ.
ಆರ್ಥಿಕ ಬಿಕ್ಕಟ್ಟು: ವೆನೆಜುವೆಲಾದಂತಹ ದೇಶಗಳಲ್ಲಿ ತೈಲ ಸಂಪತ್ತಿದ್ದರೂ, ಆಡಳಿತ ವೈಫಲ್ಯ ಮತ್ತು ಅಂತರಾಷ್ಟ್ರೀಯ ನಿರ್ಬಂಧಗಳಿಂದಾಗಿ ಅಲ್ಲಿನ ಜನರು ಬ್ರೆಡ್ ಕೊಳ್ಳಲು ಕೂಡ ಚೀಲದ ತುಂಬಾ ನೋಟುಗಳನ್ನು ಕೊಂಡೊಯ್ಯುವ ಪರಿಸ್ಥಿತಿ ಬಂದಿದೆ.

