ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭವಾಗುತ್ತಿದ್ದಂತೆಯೇ ಪ್ರೇಕ್ಷಕರಿಗೆ ಭರ್ಜರಿ ಶಾಕ್ ಎದುರಾಗಿದೆ. ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ ಪ್ರಸಾದ್ ಮೊದಲ ವಾರದಲ್ಲೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭದಲ್ಲೇ ಭರ್ಜರಿ ಟ್ವಿಸ್ಟ್ ಎದುರಾಗಿದೆ. ಹಲವು ನಿರೀಕ್ಷೆಗಳೊಂದಿಗೆ ಬಿಗ್ ಬಾಸ್‌ಗೆ ಎಂಟ್ರಿ ನೀಡಿದ್ದ ಪ್ರಥಮಾ ಪ್ರಸಾದ್ ಮೊದಲ ವಾರದಲ್ಲೇ ಎಲಿಮಿನೇಟ್ ಆಗಿದ್ದಾರೆ. ವಿಶೇಷವೆಂದರೆ, ಈ ಸೀಸನ್‌ನಲ್ಲಿ ಸ್ಪರ್ಧಿಗಳಿಗೆ ಆರಂಭದಲ್ಲೇ ನೇರವಾಗಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸುವ ಅವಕಾಶ ಇರಲಿಲ್ಲ. ಹೀಗಾಗಿ ಪ್ರಥಮಾ ಪ್ರಸಾದ್ ಅವರ ಬಿಗ್ ಬಾಸ್ ಜರ್ನಿ ನಿಜವಾಗಿ ಆರಂಭವಾಗುವ ಮೊದಲೇ ಅಂತ್ಯಗೊಂಡಿದೆ.
ಹೌದು. ಬಿಗ್ ಬಾಸ್ ಇತಿಹಾಸದಲ್ಲೇ ಮನೆಯೊಳಗೆ ಕಾಲಿಡುವ ಮುನ್ನವೇ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಎಂಬ ವಿಶೇಷ ದಾಖಲೆಯೂ ಪ್ರಥಮಾ ಪ್ರಸಾದ್ ಅವರ ಪಾಲಾಗಿದೆ. ಮುಖ್ಯ ಮನೆಯ ಪ್ರವೇಶ ಪಡೆಯಲು ಸಾಧ್ಯವಾಗದಿದ್ದರೂ, ಅವರು ಬರಿಗೈಯಲ್ಲಿ ಹೊರಬಂದಿಲ್ಲ. ಶೋನ ಸ್ಪಾನ್ಸರ್‌ಗಳಿಂದ ಪ್ರಥಮಾಗೆ ₹3 ಲಕ್ಷ ನಗದು ಬಹುಮಾನ ದೊರೆತಿದೆ.
ಬಿಗ್ ಬಾಸ್ ಮನೆ ಪ್ರವೇಶಿಸುವ ಮುನ್ನವೇ ಎಲಿಮಿನೇಷನ್
ಈ ಬಾರಿ ‘ಬಿಗ್ ಬಾಸ್ ಕನ್ನಡ 13’ರ ಫಾರ್ಮ್ಯಾಟ್ ಕೂಡ ಸಾಕಷ್ಟು ವಿಭಿನ್ನವಾಗಿದೆ. ಸ್ಪರ್ಧಿಗಳು ನೇರವಾಗಿ ಬಿಗ್ ಬಾಸ್ ಮನೆ ಪ್ರವೇಶಿಸದೆ ವಿಮಾನದ ಮೂಲಕ ಶೋಗೆ ಪ್ರವೇಶಿಸಿದ್ದರು. ಕೆಲವರಿಗೆ ಮಾತ್ರ ಬಿಗ್ ಬಾಸ್ ಮನೆಯೊಳಗೆ ಹೋಗುವ ಅವಕಾಶ ಸಿಕ್ಕಿತ್ತು. ಆದರೆ ಪ್ರಥಮಾ ಪ್ರಸಾದ್ ಎಲಿಮಿನೇಟ್ ಆಗುವ ಮೂಲಕ ಬಿಗ್ ಬಾಸ್ ಮನೆಯ ನಿಜವಾದ ಜರ್ನಿ ಆರಂಭಿಸುವ ಮೊದಲೇ ಶೋನಿಂದ ಹೊರಬಂದಿದ್ದಾರೆ
‘ಇದು ಬ್ಯಾಡ್ ಲಕ್ ಅಲ್ಲ, ಗುಡ್ ಲಕ್’
ಎಲಿಮಿನೇಷನ್ ಬಳಿಕ ವೇದಿಕೆಗೆ ಆಗಮಿಸಿದ ಪ್ರಥಮಾ ಅವರಿಗೆ ನಿರೂಪಕ ಕಿಚ್ಚ ಸುದೀಪ್ ಸಾಂತ್ವನ ಹೇಳುತ್ತಾ ‘ಬ್ಯಾಡ್ ಲಕ್’ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಥಮಾ, ಇದು ಬ್ಯಾಡ್ ಲಕ್ ಅಲ್ಲ, ಬದಲಿಗೆ ಗುಡ್ ಲಕ್ ಎಂದು ಹೇಳಿದ್ದಾರೆ.
ನಟಿ, ನೃತ್ಯ ಕಲಾವಿದೆ ಹಾಗೂ ಈಜುಗಾರ್ತಿಯಾಗಿ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ತಮಗೆ, ಇನ್ಮುಂದೆ ‘ಪ್ರಥಮಾ ಪ್ರಸಾದ್ ಎಂದರೆ ಬಿಗ್ ಬಾಸ್ ಸ್ಪರ್ಧಿ’ ಎಂಬ ಹೊಸ ಗುರುತು ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಮೊದಲ ದಿನವೇ ಕೃಷ್ಣ ಶಾಸ್ತ್ರಿ ಜೊತೆ ಕಿರಿಕ್
ಬಿಗ್ ಬಾಸ್ ಆರಂಭವಾದ ಮೊದಲ ದಿನವೇ ಪ್ರಥಮಾ ಪ್ರಸಾದ್ ಹಾಗೂ ಸ್ಪರ್ಧಿ ಕೃಷ್ಣ ಶಾಸ್ತ್ರಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಕೃಷ್ಣ ಶಾಸ್ತ್ರಿ ಅವರು ಪ್ರಥಮಾ ಅವರನ್ನು ‘ಆಂಟಿ’ ಎಂದು ಕರೆದಿದ್ದು ಅಸಮಾಧಾನಕ್ಕೆ ಕಾರಣವಾಗಿತ್ತು. ಬಳಿಕ ಇಬ್ಬರ ನಡುವಿನ ಮುನಿಸು ಮುಂದುವರಿದಿತ್ತು. ಈ ವಿಚಾರವೂ ಪ್ರಥಮಾ ಪ್ರಸಾದ್ ಅವರ ಬಿಗ್ ಬಾಸ್ ಪಯಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು
‘ಬಿಗ್ ಬಾಸ್ ನನಗೆ ಅದ್ಭುತ ಅನುಭವ’
ತಮ್ಮ 15 ವರ್ಷಗಳ ಕಲಾ ಪಯಣವನ್ನು ನೆನಪಿಸಿಕೊಂಡ ಪ್ರಥಮಾ, ಬಿಗ್ ಬಾಸ್ ಅನುಭವವನ್ನು ಅತ್ಯಂತ ವಿಶಿಷ್ಟ ಹಾಗೂ ಸಮೃದ್ಧ ಅನುಭವ ಎಂದು ಬಣ್ಣಿಸಿದ್ದಾರೆ. ಈ ಕಾರ್ಯಕ್ರಮ ತಮ್ಮ ಪಾಲಿಗೆ ಮತ್ತೊಂದು ಅದ್ಭುತ ವೇದಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಜನತೆ ಇನ್ನಷ್ಟು ಉತ್ತಮ ಅವಕಾಶಗಳನ್ನು ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಮೊದಲ ವಾರದಲ್ಲೇ ಎಲಿಮಿನೇಟ್ ಆದರೂ, ₹3 ಲಕ್ಷ ನಗದು ಬಹುಮಾನ ಮತ್ತು ಬಿಗ್ ಬಾಸ್ ಸ್ಪರ್ಧಿ ಎಂಬ ಹೊಸ ಗುರುತಿನೊಂದಿಗೆ ಪ್ರಥಮಾ ಪ್ರಸಾದ್ ಶೋಗೆ ವಿದಾಯ ಹೇಳಿದ್ದಾರೆ.

