ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದ ಶಂಕಿತ ಜಾಲವನ್ನು ಭೇದಿಸಿ 10 ಮಂದಿ ಓವರ್‌ಗ್ರೌಂಡ್ ವರ್ಕರ್ಸ್ (OGWs) ಗಳನ್ನು ಬಂಧಿಸಿದ್ದಾರೆ. ಶುಕ್ರವಾರ ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುತ್ತಿದ್ದ ಜಾಲದ ಕುರಿತು ತನಿಖೆ ನಡೆಸಿದ ಬಳಿಕ ಈ ಬಂಧನಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ಡಿಜಿಟಲ್ ಪಾವತಿ ವೇದಿಕೆಗಳ ಮೂಲಕ ನಡೆದ ಅನುಮಾನಾಸ್ಪದ ಆನ್‌ಲೈನ್ ವಹಿವಾಟುಗಳನ್ನು ತನಿಖಾಧಿಕಾರಿಗಳು ಪರಿಶೀಲಿಸಿದ್ದು, ಹಲವು ಹಂತಗಳ ಮೂಲಕ ಹಣ ವರ್ಗಾವಣೆಯಾಗಿರುವುದನ್ನು ಪತ್ತೆಹಚ್ಚಿದ್ದಾರೆ.
“ಈ ತನಿಖೆಯಲ್ಲಿ ಉಗ್ರರು ಹಾಗೂ ವಿವಿಧ ಜೈಲುಗಳಲ್ಲಿ ಬಂಧಿತರಾಗಿರುವ ಉಗ್ರರ ಸಹಚರರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳು ಭಾಗಿಯಾಗಿರುವ ದೊಡ್ಡ ಜಾಲವೊಂದು ಬೆಳಕಿಗೆ ಬಂದಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ 10 ಮಂದಿ ಸಹಚರರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬಂಧಿತರು ಉಗ್ರರಿಗೆ ಹಣಕಾಸು ನೆರವು ನೀಡಿದ್ದಾರೆ ಎಂಬುದು ಸದ್ಯದ ಆರೋಪವಾಗಿದ್ದು, ತನಿಖೆ ಮುಂದುವರಿದಿದೆ.
ಭೂತಾನ್‌ನಲ್ಲಿ ಹಿಮನದಿ ಸರೋವರ ಸ್ಫೋಟ; ಅಸ್ಸಾಂ, ಪಶ್ಚಿಮ ಬಂಗಾಳದ 5 ಜಿಲ್ಲೆಗಳಲ್ಲಿ ಪ್ರವಾಹ ಎಚ್ಚರಿಕೆ
ಗುವಾಹಟಿ: ಭೂತಾನ್‌ನಲ್ಲಿ ಹಿಮನದಿ ಸರೋವರ ಸ್ಫೋಟದಿಂದ (Glacial Lake Outburst) ದಿಢೀರ್ ಪ್ರವಾಹ ಉಂಟಾಗಿದ್ದು, ಸೌರಶಕ್ತಿ ಆಧಾರಿತ ನೀರಾವರಿ ಯೋಜನೆ ಭಾಗಶಃ ಹಾನಿಗೊಳಗಾಗಿದೆ. ಅಲ್ಲದೆ, ಹೆದ್ದಾರಿಯ ಒಂದು ಭಾಗದಲ್ಲಿ ಭಾರಿ ಪ್ರಮಾಣದ ಅವಶೇಷಗಳು ಸಂಗ್ರಹವಾಗಿವೆ. ಈ ಘಟನೆಯಿಂದ ಭಾರತದ ಈಶಾನ್ಯ ಭಾಗದಲ್ಲೂ ಪ್ರವಾಹದ ಆತಂಕ ಎದುರಾಗಿದ್ದು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಐದು ಜಿಲ್ಲೆಗಳಲ್ಲಿ ಪ್ರವಾಹ ಮುನ್ನೆಚ್ಚರಿಕೆ ನೀಡಲಾಗಿದೆ.
ಭೂತಾನ್‌ನಲ್ಲಿ ಸಂಭವಿಸಿದ ಹಿಮನದಿ ಸರೋವರ ಸ್ಫೋಟದಿಂದ ಉಂಟಾದ ದಿಢೀರ್ ಪ್ರವಾಹದ ಹಿನ್ನೆಲೆಯಲ್ಲಿ, ಕೆಳಭಾಗದ ಪ್ರದೇಶಗಳ ಜನರಿಗೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಸದ್ಯದವರೆಗೆ ಭೂತಾನ್‌ನಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಭಾರತದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ. ಸಂಕೋಶ್ ನದಿಯಲ್ಲಿ ದಿಢೀರ್ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ವಿಶೇಷ ಪ್ರವಾಹ ಮುನ್ನೆಚ್ಚರಿಕೆ ಹೊರಡಿಸಿದ್ದಾರೆ. ನದಿಯ ನೀರಿನ ಮಟ್ಟದ ಮೇಲೆ ನಿರಂತರ ನಿಗಾ ಇರಿಸಲಾಗಿದೆ.
ಭೂತಾನ್‌ನ ಪುನಾಖಾ ಜಿಲ್ಲೆಯ ಗುಮಾ ಗೆವೊಗ್ ವ್ಯಾಪ್ತಿಯ ದೋಚುಖಾ-ಜೋಮ್ಲಿಂಗ್‌ಥಾಂಗ್-ರಿತ್ಸಾ ಚಿವೊಗ್ ಪ್ರದೇಶದಲ್ಲಿರುವ ಸೌರಶಕ್ತಿ ಆಧಾರಿತ ನೀರಾವರಿ ಲಿಫ್ಟಿಂಗ್ ವ್ಯವಸ್ಥೆ ಪ್ರವಾಹದಿಂದ ಭಾಗಶಃ ಹಾನಿಗೊಳಗಾಗಿದೆ. ಈ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದು, ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಇನ್ನೂ ಅಂದಾಜು ಮಾಡುತ್ತಿದ್ದಾರೆ.ಸ್ಥಳೀಯ ಜನಪ್ರತಿನಿಧಿಯೊಬ್ಬರ ಪ್ರಕಾರ, ಈ ಪ್ರದೇಶದ ನಿವಾಸಿಗಳು ಎದುರಿಸುತ್ತಿದ್ದ ನೀರಿನ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಈ ವರ್ಷದ ಆರಂಭದಲ್ಲಿ ನೀರಾವರಿ ಯೋಜನೆಯನ್ನು ಸ್ಥಾಪಿಸಲಾಗಿತ್ತು.
ದಿಢೀರ್ ಪ್ರವಾಹದ ರಭಸಕ್ಕೆ ಪುನಾಖಾ-ಗಾಸಾ ಹೆದ್ದಾರಿಯ ಡ್ಜೋಮ್ಲಿಂಗ್‌ಥಾಂಗ್ ಪ್ರದೇಶದ ಒಂದು ಭಾಗದಲ್ಲಿ ಮಣ್ಣು, ಕಲ್ಲು ಸೇರಿದಂತೆ ಭಾರಿ ಪ್ರಮಾಣದ ಅವಶೇಷಗಳು ಹರಿದುಬಂದು ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಈ ಕುರಿತು ದೋಚುಖಾ-ಡ್ಜೋಮ್ಲಿಂಗ್‌ಥಾಂಗ್-ರಿತ್ಸಾ ಗ್ರಾಮದ ಸರ್ಕಾರಿ ಪ್ರತಿನಿಧಿ (ತ್ಸೊಗ್ಪಾ) ಮಾಹಿತಿ ನೀಡಿದ್ದಾರೆ.
ಭೂತಾನ್‌ನ ಗಾಸಾ ಜಿಲ್ಲೆಯ ವಕಿಲಾ ಪರ್ವತದ ಕೆಳಭಾಗದಲ್ಲಿರುವ ಶಿಂತಾಫು ಸರೋವರ (Shintaphu Lake), ಶಿಂತಾಫು ತ್ಸೊ (Shintaphu Tsho) ಎಂದೂ ಕರೆಯಲ್ಪಡುತ್ತದೆ. ಗುರುವಾರ ಸಂಜೆ ಈ ಸರೋವರದಲ್ಲಿ ಹಿಮನದಿ ಸರೋವರ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

