ಬೆಂಗಳೂರು: ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಸಂಘಟನೆ ಕಾರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಎಐಸಿಸಿಯು ಹೊಸ ಪರಿಕಲ್ಪನೆಯೊಂದಿಗೆ ಕನೆಕ್ಟ್ ಕಾಂಗ್ರೆಸ್ ಸೆಂಟರ್ ಕೇಂದ್ರ ಸ್ಥಾಪನೆಗೆ ಮುಂದಾಗಿದೆ. ಅಂತೆಯೇ ರಾಜ್ಯದಲ್ಲಿಯೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಬಿ. ಶಶಿಧರ್ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಕನೆಕ್ಟ್ ಸೆಂಟರ್ ರಚಿಸಲಾಗಿದ್ದು, ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಎಸ್.ಎಂ. ಕಿರಣ್ ಜಿತ್ ಅವರನ್ನು ಸಹ ಅಧ್ಯಕ್ಷರಾಗಿ, ವಸಂತ ಕವಿತಾ ಮತ್ತು ಧ್ರುವ ಜತ್ತಿ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ ಕನೆಕ್ಟ್ ಸೆಂಟರ್ ಗೆ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಕೆಪಿಸಿಸಿ ಕನೆಕ್ಟ್ ಸೆಂಟರ್ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅಗತ್ಯವಾದ ವ್ಯವಸ್ಥೆಗಳನ್ನು ಕಲ್ಪಿಸಿ ಸಜ್ಜುಗೊಳಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ರಾಮಚಂದ್ರಪ್ಪ ತಿಳಿಸಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ ರಾಷ್ಟ್ರದಾದ್ಯಂತ ಪಕ್ಷ ಸಂಘಟನೆ ಬಲಪಡಿಸಲು ಹೊಸ ಪರಿಕಲ್ಪನೆಯೊಂದಿಗೆ ಕನೆಕ್ಟ್ ಕಾಂಗ್ರೆಸ್ ಸೆಂಟರ್ ಎಂಬ ಕೇಂದ್ರ ಸ್ಥಾಪಿಸಿದ್ದು, ಪ್ರತಿ ರಾಜ್ಯದಲ್ಲಿಯೂ ಆಯಾ ಪ್ರದೇಶ ಕಾಂಗ್ರೆಸ್ ಸಮಿತಿಗಳಿಂದ ಈ ಹೊಸ ಕೇಂದ್ರ ಸ್ಥಾಪಿಸಲು ಸೂಚಿಸಲಾಗಿದೆ. ಅಂತೆಯೇ ರಾಜ್ಯದಲ್ಲಿ ಕೆಪಿಸಿಸಿ ಕನೆಕ್ಟ್ ಸೆಂಟರ್ ಸ್ಥಾಪಿಸಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಪಕ್ಷಕ್ಕೆ ಸಂಬಂಧಿಸಿದ ಅಗತ್ಯ ಸಂಘಟನಾ ಚಟುವಟಿಕೆಗಳನ್ನು ನಿರ್ವಹಿಸಲು ರಾಜ್ಯಮಟ್ಟದಿಂದ ಬೂತ್ ಮಟ್ಟದವರೆಗೆ ಎಲ್ಲಾ ಹಂತದ ನಾಯಕರೊಂದಿಗೆ ಸೌಹಾರ್ದಯುತ ಸಮನ್ವಯ ಕಾಪಾಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನಕ್ಕೆ ಸಚಿವ ಮಧು ಬಂಗಾರಪ್ಪ ತೀವ್ರ ಸಂತಾಪ
ಖ್ಯಾತ ರಂಗ ನಿರ್ದೇಶಕ, ಸಮಾಜಮುಖಿ ಚಿಂತಕ, ಶಿವಮೊಗ್ಗ ಜಿಲ್ಲೆಯ ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ಅವರ ನಿಧನ ಸುದ್ದಿ ಆಘಾತ ಉಂಟು ಮಾಡಿದ್ದು ನಾಡಿನ ರಂಗಭೂಮಿ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟವಾದಂತಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸಂತಾಪ ಸೂಚಿಸಿದ್ದಾರೆ.
ದೆಹಲಿಯ ಎನ್‌ಎಸ್‌ಡಿ ಯಲ್ಲಿ ತರಬೇತಿ ಪಡೆದು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪ್ರಾಧ್ಯಾಪಕರಾಗಿ, ಹೆಗ್ಗೋಡಿನ ನೀನಾಸಂನ ರಂಗ ಶಿಕ್ಷಣ ಕೇಂದ್ರ ಮತ್ತು ಸಾಣೇಹಳ್ಳಿಯ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಹಾಗೂ ಮೈಸೂರು ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಚಿದಂಬರರಾವ್ ಜಂಬೆ ತಮ್ಮ ಬದುಕನ್ನೇ ರಂಗಭೂಮಿಗಾಗಿ ಮುಡಿಪಾಗಿಟ್ಟಿದ್ದ ಸಾಧಕರು ಎಂದು ಸ್ಮರಿಸಿದ್ದಾರೆ.
ದೇಶದ ಅನೇಕ ಪ್ರಖ್ಯಾತ ರಂಗತಂಡಗಳಿಗೆ ನಾಟಕಗಳನ್ನು ನಿರ್ದೇಶಿಸಿದ್ದರು. ಗಾಂಧಿವಾದಿಯಾಗಿ ಮಹಾತ್ಮ ಗಾಂಧೀಜಿ ಅವರ ಬದುಕು ಮತ್ತು ಜೀವನವನ್ನು ವಿದ್ಯಾರ್ಥಿಗಳಿಗೆ ಸದಾ ತಿಳಿಸುವುದಲ್ಲದೆ ತಾವು ಕೂಡ ಗಾಂಧಿ ವಾದಿಯಾಗಿ ತಮ್ಮ ಬದುಕು ಸಾಗಿಸಿದ್ದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಲವು ನಾಟಕ ಅಕಾಡೆಮಿ ಪ್ರಶಸ್ತಿ ಗಳಿಗೆ ಪುರಸ್ಕೃತರಾಗಿದ್ದರು. ನಮ್ಮ ಜಿಲ್ಲೆಯ ಸಾಮಾಜಿಕ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ನೆಲದ ಸಾಕ್ಷಿಪ್ರಜ್ಞೆಯಂತಿದ್ದರು ಎಂದು ಹೇಳಿದ್ದಾರೆ.
ಚಿದಂಬರರಾವ್ ಅವರ ಅಗಲಿಕೆಯಿಂದ ನಾಡಿನ ರಂಗಭೂಮಿ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರ ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ದೊರೆಯಲಿ ಎಂದು ಮಧು ಬಂಗಾರಪ್ಪ ಪ್ರಾರ್ಥಿಸಿದ್ದಾರೆ.

