ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಗೂ ಕುಟುಂಬದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಹಳೆಯ ವಿಡಿಯೋಗಳ ತಿರುಚುವಿಕೆ ಮತ್ತು ನಿಂದನೆಗಳ ವಿರುದ್ಧ ‘ಬಿಗ್ ಬಾಸ್’ ಖ್ಯಾತಿಯ ನಟಿ ಅಶ್ವಿನಿ ಗೌಡ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಮಾನಹಾನಿ ಮೊಕದ್ದಮೆ ದಾಖಲಿಸಿರುವ ಅವರು, ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.
ವರದಿಯ ಪ್ರಕಾರ, ಕೆಲವರು ಅಶ್ವಿನಿ ಗೌಡ ಅವರ ವೈಯಕ್ತಿಕ ಜೀವನ, ವೈವಾಹಿಕ ಬದುಕು ಹಾಗೂ ಕುಟುಂಬದ ಹಿನ್ನೆಲೆಯ ಕುರಿತು ಸತ್ಯಾಸತ್ಯತೆ ಪರಿಶೀಲಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳು ಮತ್ತು ಅಪಪ್ರಚಾರ ನಡೆಸುತ್ತಿದ್ದರು. ಹಳೆಯ ವಿಡಿಯೋಗಳು ಹಾಗೂ ಸಂದರ್ಶನಗಳನ್ನು ಸಂದರ್ಭದಿಂದ ಬೇರ್ಪಡಿಸಿ ತಿರುಚಿ ಪ್ರಸಾರ ಮಾಡಲಾಗುತ್ತಿದೆ ಎಂದು ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅಶ್ವಿನಿ ಗೌಡ ಹಾಗೂ ಅವರ ಕುಟುಂಬದ ವಿರುದ್ಧ ಮಾನಹಾನಿಕರ ವಿಡಿಯೋ, ಫೋಟೋ ಅಥವಾ ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳು ಹಾಗೂ ಯೂಟ್ಯೂಬ್‌ನಲ್ಲಿ ಪ್ರಕಟಿಸಿರುವ ಅವಹೇಳನಕಾರಿ ವಿಷಯಗಳನ್ನು ಅಳಿಸುವಂತೆಯೂ ಆದೇಶಿಸಿದೆ ಎಂದು ವರದಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಶ್ವಿನಿ ಗೌಡ, ತಮ್ಮ ಮೌನವನ್ನು ಯಾರೂ ದೌರ್ಬಲ್ಯವೆಂದು ಭಾವಿಸಬಾರದು ಎಂದು ಹೇಳಿದ್ದಾರೆ. ಕುಟುಂಬದ ನೆಮ್ಮದಿಗಾಗಿ ಈವರೆಗೆ ಮೌನವಾಗಿದ್ದೆ, ಇನ್ನು ಮುಂದೆ ತಮ್ಮ ಉತ್ತರ ಕಾನೂನಿನ ಮೂಲಕವೇ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ವೈವಾಹಿಕ ಜೀವನದ ಸಂಪೂರ್ಣ ಸತ್ಯ ಯಾರಿಗೂ ತಿಳಿದಿಲ್ಲದಿದ್ದರೂ ಇಲ್ಲಸಲ್ಲದ ಆರೋಪಗಳನ್ನು ಮಾಡಿ ತೇಜೋವಧೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ನ್ಯಾಯಾಲಯದ ಆದೇಶದ ಬಳಿಕವೂ ಆಧಾರರಹಿತ ಆರೋಪಗಳು, ಟ್ರೋಲಿಂಗ್ ಅಥವಾ ಹಳೆಯ ವಿಡಿಯೋಗಳ ತಿರುಚಿದ ಪ್ರಸಾರ ಮುಂದುವರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನನ್ನ ಮೌನ ದೌರ್ಬಲ್ಯವಲ್ಲ… ನನ್ನ ಕುಟುಂಬದ ನೆಮ್ಮದಿಗಾಗಿ ತೆಗೆದುಕೊಂಡ ನಿರ್ಧಾರ.
ನನ್ನ ಬಗ್ಗೆ ಸತ್ಯಾಸತ್ಯತೆ ತಿಳಿಯದೆ ಪ್ರಸಾರವಾದ ವಿಡಿಯೋಗಳು, ಸಂದರ್ಶನಗಳು, ಟ್ರೋಲ್‌ಗಳು, ಫೋಟೋಗಳು ಹಾಗೂ ವೈಯಕ್ತಿಕ ವಿಚಾರಗಳು ನನ್ನನ್ನು ಮಾತ್ರವಲ್ಲ, ನನ್ನ ತಾಯಿ ಮತ್ತು ಮಗನನ್ನೂ ನೋಯಿಸಿವೆ.
ನನ್ನ ಹೆಸರು, ಇಮೇಜ್, ಫೋಟೋ ಹಾಗೂ ನನ್ನ ಕುಟುಂಬದ ಹೆಸರು, ಫೋಟೋ–ವಿಡಿಯೋಗಳನ್ನು ಬಳಸುವುದರ ವಿರುದ್ಧ ನಾನು ಈಗಾಗಲೇ Defamation Suit ದಾಖಲಿಸಿದ್ದೇನೆ.
ನನ್ನ ಬಗ್ಗೆ ಈಗಾಗಲೇ ಪ್ರಕಟಿಸಿರುವ ವಿಷಯಗಳನ್ನೂ ತೆಗೆದುಹಾಕಬೇಕು, ಮುಂದೆಯೂ ಯಾವುದೇ ರೀತಿಯಲ್ಲಿ ಬಳಸಬಾರದು ಎಂದು ನ್ಯಾಯಾಲಯದ ಆದೇಶವಿದೆ.
ಆದ್ದರಿಂದ ನ್ಯಾಯಾಲಯದ ಆದೇಶವನ್ನು ಗೌರವಿಸಿ ಎಲ್ಲ ಸಂಬಂಧಿತ ವಿಷಯಗಳನ್ನು ತಕ್ಷಣವೇ ಡಿಲೀಟ್ ಮಾಡಬೇಕು.
ನಾನು ಒಬ್ಬ ತಾಯಿ… ನನ್ನ ಮಗನ ಭವಿಷ್ಯ ನನ್ನ ಮೊದಲ ಆದ್ಯತೆ.ನಾನು ಒಬ್ಬ ಮಗಳು… ನನ್ನ ತಾಯಿಯ ಮನಸ್ಸಿಗೆ ನೋವಾಗುವುದು ನನಗೆ ದೊಡ್ಡ ನೋವು.ನನ್ನ ತಂದೆ ಕಲಿಸಿಕೊಟ್ಟ ದಾರಿಯಲ್ಲಿ, ಅವರ ಆಶೀರ್ವಾದದೊಂದಿಗೆ ನಾನು ನಡೆಯುತ್ತಿದ್ದೇನೆ.
ಭಯದಿಂದ ನಾನು ಮೌನವಾಗಿಲ್ಲ… ಕುಟುಂಬಕ್ಕಾಗಿ ಮೌನವಾಗಿದ್ದೇನೆ.
ಇನ್ನು ನನ್ನ ಉತ್ತರ ಎಂದು ಅಶ್ವಿನಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

