ಹಿಂದೂ ಧರ್ಮದಲ್ಲಿ ಅಮಾವಾಸ್ಯೆ ದಿನಕ್ಕೆ ವಿಶೇಷ ಮಹತ್ವವಿದೆ. ಅದರಲ್ಲೂ ಶ್ರಾವಣ ಮಾಸದ ಕೊನೆಯ ಅಮಾವಾಸ್ಯೆಯನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ಇದನ್ನು ಕೆಲವೆಡೆ ಬೆನಕನ ಅಮಾವಾಸ್ಯೆ, ಪೋಲಾಲ ಅಮಾವಾಸ್ಯೆ, ಶ್ರಾವಣ ಅಮಾವಾಸ್ಯೆ ಅಥವಾ ಪೋಲಂಬ ವ್ರತ ಎಂದು ಕರೆಯಲಾಗುತ್ತದೆ.ಈ ವರ್ಷ ಬೆನಕನ ಅಮಾವಾಸ್ಯೆ ಸೆಪ್ಟೆಂಬರ್ 11, ಶುಕ್ರವಾರ ಬಂದಿದೆ. ಈ ದಿನ ದೇವರ ಪೂಜೆಯ ಜೊತೆಗೆ ಪಿತೃಗಳನ್ನು ಸ್ಮರಿಸಿ ತರ್ಪಣ, ಶ್ರಾದ್ಧ ಅಥವಾ ಪಿಂಡದಾನ ಮಾಡುವ ಪದ್ಧತಿಯೂ ಇದೆ. ಕುಟುಂಬದ ಸುಖ, ಸಂತೋಷ ಮತ್ತು ಸಮೃದ್ಧಿಗಾಗಿ ವ್ರತ ಹಾಗೂ ಪೂಜೆ ಮಾಡುವ ನಂಬಿಕೆ ಹಲವು ಕಡೆ ಇದೆ.
ಬೆನಕನ ಅಮಾವಾಸ್ಯೆ ದಿನಾಂಕ ಮತ್ತು ತಿಥಿ
ಬೆನಕನ ಅಮಾವಾಸ್ಯೆ: ಸೆಪ್ಟೆಂಬರ್ 11, 2026, ಶುಕ್ರವಾರ
ಅಮಾವಾಸ್ಯೆ ತಿಥಿ ಆರಂಭ: ಸೆಪ್ಟೆಂಬರ್ 10, ಗುರುವಾರ ಬೆಳಗ್ಗೆ 10:33
ಅಮಾವಾಸ್ಯೆ ತಿಥಿ ಮುಕ್ತಾಯ: ಸೆಪ್ಟೆಂಬರ್ 11, ಶುಕ್ರವಾರ ಬೆಳಗ್ಗೆ 8:56
ಸ್ನಾನ ಮತ್ತು ದಾನ ಮುಹೂರ್ತ: ಬೆಳಗ್ಗೆ 4:31ರಿಂದ 5:17ರವರೆಗೆ
ಅಭಿಜಿತ್ ಮುಹೂರ್ತ: ಬೆಳಗ್ಗೆ 11:53ರಿಂದ ಮಧ್ಯಾಹ್ನ 12:43ರವರೆಗೆ
ಅಮೃತ ಕಾಲ: ಬೆಳಗ್ಗೆ 11:47ರಿಂದ ಮಧ್ಯಾಹ್ನ 1:18ರವರೆಗೆ
ಬೆನಕನ ಅಮಾವಾಸ್ಯೆಯಂದು ಏನು ಮಾಡಬೇಕು?
ಅಮಾವಾಸ್ಯೆಯ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡುವುದು ಶುಭವೆಂದು ನಂಬಲಾಗಿದೆ. ಸಾಧ್ಯವಾದರೆ ಪವಿತ್ರ ನದಿ ಅಥವಾ ತೀರ್ಥದಲ್ಲಿ ಸ್ನಾನ ಮಾಡಬಹುದು. ಅದು ಸಾಧ್ಯವಾಗದಿದ್ದರೆ ಮನೆಯಲ್ಲೇ ಸ್ನಾನ ಮಾಡುವ ನೀರಿಗೆ ಸ್ವಲ್ಪ ಪವಿತ್ರ ನದಿಯ ನೀರನ್ನು ಸೇರಿಸಿಕೊಳ್ಳಬಹುದು.
ಸ್ನಾನದ ಬಳಿಕ ಸ್ವಚ್ಛವಾದ ಬಟ್ಟೆ ಧರಿಸಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು. ವ್ರತ ಅಥವಾ ಪೂಜೆ ಮಾಡುವವರು ತಮ್ಮ ಮನಸ್ಸಿನಲ್ಲಿರುವ ಉದ್ದೇಶವನ್ನು ದೇವರ ಮುಂದೆ ಹೇಳಿಕೊಂಡು ಸಂಕಲ್ಪ ಮಾಡಬಹುದು.
ನಂತರ ದೇವರಿಗೆ ಹೂವು, ಹಣ್ಣು ಮತ್ತು ನೈವೇದ್ಯ ಅರ್ಪಿಸಿ ಧೂಪ, ದೀಪ ಬೆಳಗಿಸಿ ಪೂಜೆ ಸಲ್ಲಿಸಬೇಕು. ಕೊನೆಯಲ್ಲಿ ಆರತಿ ಮಾಡಿ ಪೂಜೆಯನ್ನು ಮುಕ್ತಾಯಗೊಳಿಸಬಹುದು.
ಸಂಜೆಯ ವೇಳೆಯಲ್ಲೂ ಮನೆಯ ದೇವರಿಗೆ ಸರಳವಾಗಿ ಪೂಜೆ ಸಲ್ಲಿಸುವ ಪದ್ಧತಿ ಇದೆ.
ಪಿತೃಗಳಿಗೆ ತರ್ಪಣ ನೀಡುವುದು
ಬೆನಕನ ಅಮಾವಾಸ್ಯೆಯ ಮತ್ತೊಂದು ಪ್ರಮುಖ ಆಚರಣೆ ಪಿತೃಗಳನ್ನು ಸ್ಮರಿಸುವುದು. ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ದಿನ ಪಿತೃಗಳಿಗೆ ತರ್ಪಣ, ಶ್ರಾದ್ಧ ಅಥವಾ ಪಿಂಡದಾನ ಮಾಡಬಹುದು.
ಪೂರ್ವಜರನ್ನು ಸ್ಮರಿಸಿ ಪ್ರಾರ್ಥನೆ ಸಲ್ಲಿಸುವುದರಿಂದ ಶುಭ ಫಲ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ.
ಸಾಲ ಮತ್ತು ಆರ್ಥಿಕ ಸಮಸ್ಯೆಗೆ ಪರಿಹಾರ
ಅಮಾವಾಸ್ಯೆಯಂದು ಕೆಲವು ಸರಳ ಪರಿಹಾರಗಳನ್ನು ಮಾಡುವುದರಿಂದ ಆರ್ಥಿಕ ಸಮಸ್ಯೆ ಹಾಗೂ ಸಾಲದ ಬಾಧೆ ಕಡಿಮೆಯಾಗುತ್ತದೆ ಎಂಬ ಜ್ಯೋತಿಷ್ಯ ನಂಬಿಕೆಯೂ ಇದೆ.
ಮನೆ ಸ್ವಚ್ಛಗೊಳಿಸುವ ನೀರಿಗೆ ಕಲ್ಲುಪ್ಪು ಸೇರಿಸಿ ಒರೆಸುವುದು ಅಂತಹ ಪರಿಹಾರಗಳಲ್ಲಿ ಒಂದು. ಕೆಲವರು ಉಪ್ಪಿನ ಜೊತೆಗೆ ಸ್ವಲ್ಪ ಅರಿಶಿನವನ್ನೂ ನೀರಿಗೆ ಬೆರೆಸಿ ಮನೆ ಸ್ವಚ್ಛಗೊಳಿಸುತ್ತಾರೆ.
ಸಂಜೆ ಮನೆಯ ಮುಖ್ಯದ್ವಾರ ಅಥವಾ ಹೊಸ್ತಿಲಲ್ಲಿ ದೀಪ ಬೆಳಗಿಸುವುದು ಕೂಡ ಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಲಕ್ಷ್ಮಿ ದೇವಿಯ ಕೃಪೆ ದೊರೆಯುತ್ತದೆ ಎಂಬ ನಂಬಿಕೆಯಿದೆ.
ಬೆನಕನ ಅಮಾವಾಸ್ಯೆಯ ಮಹತ್ವವೇನು?
ಈ ದಿನ ಉಪವಾಸ, ಜಪ ಮತ್ತು ಪೂಜೆ ಮಾಡುವುದರಿಂದ ಕುಟುಂಬದಲ್ಲಿ ಸುಖ-ಸಮೃದ್ಧಿ ಹೆಚ್ಚುತ್ತದೆ ಹಾಗೂ ಮಕ್ಕಳ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ಅನುಕೂಲವಾಗುತ್ತದೆ ಎಂಬ ನಂಬಿಕೆ ಇದೆ.
ಕೆಲವು ಪ್ರದೇಶಗಳಲ್ಲಿ ಹಿಟ್ಟಿನಿಂದ ದೇವರ ರೂಪವನ್ನು ಮಾಡಿ ಪೂಜಿಸುವ ಸಂಪ್ರದಾಯವೂ ಇದೆ. ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸುವುದಕ್ಕೂ ಈ ದಿನ ವಿಶೇಷ ಮಹತ್ವ ನೀಡಲಾಗುತ್ತದೆ.
ಒಟ್ಟಿನಲ್ಲಿ, ಬೆನಕನ ಅಮಾವಾಸ್ಯೆಯಂದು ಸ್ನಾನ, ದೇವರ ಪೂಜೆ, ದೀಪಾರಾಧನೆ, ದಾನ ಮತ್ತು ಪಿತೃ ಸ್ಮರಣೆ ಮಾಡುವ ಮೂಲಕ ದಿನವನ್ನು ಆಚರಿಸಲಾಗುತ್ತದೆ.
ಮೇಲಿನ ಪರಿಹಾರಗಳು ಧಾರ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಗಳ ಆಧಾರದಲ್ಲಿವೆ. ಇವುಗಳಿಗೆ ವೈಜ್ಞಾನಿಕವಾಗಿ ಖಚಿತ ಫಲಿತಾಂಶ ಸಿಗುತ್ತದೆ ಎಂದು ಪರಿಗಣಿಸಬಾರದು.

