ಬೆಂಗಳೂರು : ಬೆಂಗಳೂರಿನ ಜೀವನಾಡಿ ಎನಿಸಿಕೊಂಡಿರುವ ನಮ್ಮ ಮೆಟ್ರೋದ ಪ್ರಯಾಣ ದರವನ್ನು ಶೀಘ್ರದಲ್ಲೇ ಪರಿಷ್ಕರಿಸಲು BMRCL (ಬೆಂಗಳೂರು ಮೆಟ್ರೋ ರೈಲು ನಿಗಮ) ಸಿದ್ಧತೆ ನಡೆಸಿದೆ.
ಹೌದು. ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆಯ ಆತಂಕ ಮತ್ತೆ ಎದುರಾಗಿದೆ. ಕಳೆದ ಕೆಲವು ವಾರಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟದ ನಡುವೆ, ಮೆಟ್ರೋ ನಿಗಮವು (BMRCL) ದರ ಪರಿಷ್ಕರಣೆ ಕುರಿತಾದ ಪ್ರಮುಖ ಹೆಜ್ಜೆಯನ್ನಿಟ್ಟಿದೆ. ಈ ಹಿಂದೆ ಶೇ. 5ರಷ್ಟು ವಾರ್ಷಿಕ ಸ್ವಯಂಚಾಲಿತ ದರ ಏರಿಕೆಗೆ ಪ್ರಸ್ತಾಪಿಸಲಾಗಿತ್ತು. ಆದರೆ ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಈಗ ಹೊಸ ವರದಿ ಬಂದ ನಂತರ ಸರ್ಕಾರ ಎಷ್ಟು ಏರಿಕೆಗೆ ಸಮ್ಮತಿ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಮೆಟ್ರೋ ನಿರ್ವಹಣೆ, ಸಿಬ್ಬಂದಿ ವೇತನ, ವಿದ್ಯುತ್ ವೆಚ್ಚ ಮತ್ತು ಆರ್ಥಿಕ ನಷ್ಟದ ಕುರಿತು ಬಿಎಂಆರ್‌ಸಿಎಲ್ ಆಂತರಿಕ ಆಡಿಟ್ ಪೂರ್ಣಗೊಳಿಸಿದೆ. ಈ ವರದಿಯನ್ನು ನಾಳೆ (ಫೆಬ್ರವರಿ 25, 2026) ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಲಾಗುತ್ತದೆ.ಈ ಹಿಂದೆ ಶೇ. 5ರಷ್ಟು ದರ ಏರಿಕೆಗೆ ಪ್ರಸ್ತಾಪಿಸಲಾಗಿತ್ತು. ಆದರೆ ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ, ಸದ್ಯಕ್ಕೆ ಶೇ. 1ರಷ್ಟು ಮಾತ್ರ ದರ ಏರಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.ಮೆಟ್ರೋ ಸಂಸ್ಥೆಯು ಅನುಭವಿಸುತ್ತಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಮತ್ತು ಹೆಚ್ಚುತ್ತಿರುವ ನಿರ್ವಹಣಾ ವೆಚ್ಚವನ್ನು ನಿಭಾಯಿಸಲು ದರ ಏರಿಕೆ ಅನಿವಾರ್ಯ ಎಂದು ಬಿಎಂಆರ್‌ಸಿಎಲ್ ವಾದಿಸುತ್ತಿದೆ.ಸರ್ಕಾರದ ಅನುಮೋದನೆ ದೊರೆತರೆ, ಏಪ್ರಿಲ್ 1, 2026 ರಿಂದ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದೆ.
ಪ್ರಯಾಣಿಕರ ಆಕ್ರೋಶ
ಈಗಾಗಲೇ ದೇಶದ ಅತ್ಯಂತ ದುಬಾರಿ ಮೆಟ್ರೋ ಎಂಬ ಹಣೆಪಟ್ಟಿ ಹೊತ್ತಿರುವ ಬೆಂಗಳೂರು ಮೆಟ್ರೋದಲ್ಲಿ ಮತ್ತೆ ದರ ಏರಿಸುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದರ ಏರಿಕೆಯಿಂದಾಗಿ ಜನ ಸಾಮಾನ್ಯರು ಮತ್ತೆ ಖಾಸಗಿ ವಾಹನಗಳತ್ತ ಮುಖ ಮಾಡಬಹುದು, ಇದರಿಂದ ನಗರದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಕಳವಳ ವ್ಯಕ್ತವಾಗಿದೆ.ದರ ಏರಿಕೆ ವಿಚಾರವಾಗಿ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಕ್ರೆಡಿಟ್ ವಾರ್ ಮತ್ತು ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ.

