ನವದೆಹಲಿ : ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣದ ಬೆನ್ನಲ್ಲೇ ಭಾರತದ ವಾಹನ ಸವಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವುದರಿಂದ, ತೈಲ ಮಾರಾಟ ಕಂಪನಿಗಳು (OMCs) ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಪ್ರೀಮಿಯಂ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ₹11 ರಷ್ಟು ಭಾರೀ ಏರಿಕೆ ಮಾಡಿವೆ.
ಇಂಡಿಯನ್ ಆಯಿಲ್‌ನ ಉನ್ನತ ದರ್ಜೆಯ XP100 ಪೆಟ್ರೋಲ್ ಬೆಲೆ ಲೀಟರ್‌ಗೆ ₹149 ರಿಂದ ₹160 ಕ್ಕೆ ಜಿಗಿದಿದೆ. ಇದು ಐಷಾರಾಮಿ ಕಾರು ಮತ್ತು ಸ್ಪೋರ್ಟ್ಸ್ ಬೈಕ್ ಸವಾರರಿಗೆ ದೊಡ್ಡ ಹೊರೆಯಾಗಲಿದೆ.ಪ್ರೀಮಿಯಂ ಡೀಸೆಲ್ ರೂಪಾಂತರವಾದ Xtra Green ಬೆಲೆಯೂ ಲೀಟರ್‌ಗೆ ₹1.50 ರಷ್ಟು ಹೆಚ್ಚಳವಾಗಿದ್ದು, ₹92.99 ಕ್ಕೆ ತಲುಪಿದೆ.ಇರಾನ್-ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಕಚ್ಚಾ ತೈಲ ಪೂರೈಕೆಯ ಮಾರ್ಗಗಳು ಸ್ಥಗಿತಗೊಂಡಿರುವುದು ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿರುವುದು ಈ ಬದಲಾವಣೆಗೆ ಮುಖ್ಯ ಕಾರಣ. ಸದ್ಯಕ್ಕೆ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಇದು ಸಾಮಾನ್ಯ ಸವಾರರಿಗೆ ಸಲ್ಪ ಸಮಾಧಾನ ತಂದಿದೆ.
ವಿಮಾನ ಇಂಧನ, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ
ವಾಣಿಜ್ಯ ಎಲ್‌ಪಿಜಿ ದರವೂ ಏರಿಕೆ : 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ₹2,078.50 ಕ್ಕೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲೇ ಇದು ಒಟ್ಟು ₹300 ಕ್ಕಿಂತ ಹೆಚ್ಚು ಏರಿಕೆಯಾದಂತಾಗಿದೆ.ಸಮಾಧಾನಕರ ವಿಷಯವೆಂದರೆ, ಮನೆಯಲ್ಲಿ ಬಳಸುವ 14.2 ಕೆಜಿಯ ಅಡುಗೆ ಅನಿಲದ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ದೆಹಲಿಯಲ್ಲಿ ₹913 ರಷ್ಟಿದೆ.
ವಿಮಾನ ಇಂಧನ (ATF) ದರ: ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ವಿಮಾನ ಇಂಧನದ ದರವೂ ಗಣನೀಯವಾಗಿ ಹೆಚ್ಚಾಗಿದ್ದು, ವಿಮಾನಯಾನ ಸಂಸ್ಥೆಗಳ ಮೇಲೆ ಹೊರೆಯಾಗಿದೆ.
ಬೆಲೆ ಏರಿಕೆಗೆ ಕಾರಣವೇನು?
ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ವಿಶೇಷವಾಗಿ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಬಂದ್ ಆಗಿರುವುದು ಇಂಧನ ದರ ಏರಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

