ಪಶ್ಚಿಮ ಬಂಗಾಳದ ಒಟ್ಟು 294 ವಿಧಾನಸಭಾ ಕ್ಷೇತ್ರಗಳ ಪೈಕಿ 293 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು (ಮೇ 4) ಭಾರಿ ಬಿಗಿ ಭದ್ರತೆಯ ನಡುವೆ ಮುಂದುವರಿದಿದ್ದು, ಆರಂಭಿಕ ಟ್ರೆಂಡ್ಗಳಲ್ಲಿ ಭಾರತೀಯ ಜನತಾ ಪಕ್ಷ (BJP) ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಲು ಯಾವುದೇ ಪಕ್ಷಕ್ಕೆ ಕನಿಷ್ಠ 148 ಸ್ಥಾನಗಳ ಅಗತ್ಯವಿದೆ. ಆದರೆ ಸದ್ಯದ ಟ್ರೆಂಡ್ಗಳ ಪ್ರಕಾರ ಬಿಜೆಪಿ ಈಗಾಗಲೇ 184 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ, ಬಹುಮತದ ಗಡಿಯನ್ನು ಸುಲಭವಾಗಿ ದಾಟಿದೆ.
ದೀದಿ ಕೋಟೆಗೆ ನುಗ್ಗಿದ ಕಮಲ : ಕಳೆದ ಹಲವು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ನಡೆಸುತ್ತಿದ್ದ ತೃಣಮೂಲ ಕಾಂಗ್ರೆಸ್ (TMC) ಪಕ್ಷಕ್ಕೆ ಈ ಬಾರಿ ಭಾರಿ ಹಿನ್ನಡೆಯಾಗಿದೆ. ಆಡಳಿತಾರೂಢ ಟಿಎಂಸಿ ಕೇವಲ 100ರ ಆಸುಪಾಸಿನಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಟಿಎಂಸಿಯ ಹಲವು ಪ್ರಮುಖ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಆಡಳಿತ ಪಕ್ಷಕ್ಕೆ ದೊಡ್ಡ ಆಘಾತ ತಂದಿದೆ.
ಬದಲಾದ ರಾಜಕೀಯ ಚಿತ್ರಣ
ಬಂಗಾಳದ ಗಡಿ ಜಿಲ್ಲೆಗಳು ಹಾಗೂ ಜಂಗಲ್ಮಹಲ್ ಭಾಗದಲ್ಲಿ ಬಿಜೆಪಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಕಳೆದ ಲೋಕಸಭಾ ಚುನಾವಣೆಯ ಮುನ್ನಡೆಯನ್ನು ವಿಧಾನಸಭಾ ಚುನಾವಣೆಯಲ್ಲೂ ಕಾಯ್ದುಕೊಳ್ಳುವಲ್ಲಿ ಕೇಸರಿ ಪಡೆ ಯಶಸ್ವಿಯಾಗಿದೆ. ಮತ ಎಣಿಕೆ ಕಾರ್ಯ ಇನ್ನೂ ಪ್ರಗತಿಯಲ್ಲಿದ್ದು, ಕ್ಷಣ ಕ್ಷಣಕ್ಕೂ ಟ್ರೆಂಡ್ಗಳು ಅಂತಿಮ ಫಲಿತಾಂಶದತ್ತ ಮುನ್ನುಗ್ಗುತ್ತಿವೆ. ಮಧ್ಯಾಹ್ನದ ವೇಳೆಗೆ ಸಂಪೂರ್ಣ ಹಾಗೂ ಅಧಿಕೃತ ಚಿತ್ರಣ ಹೊರಬೀಳಲಿದ್ದು, ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಹೊಸ ರಾಜಕೀಯ ಇತಿಹಾಸ ಸೃಷ್ಟಿಯಾಗುವ ಲಕ್ಷಣಗಳು ದಟ್ಟವಾಗಿವೆ.

