ಬೆಂಗಳೂರು: ನಟ ಧನ್ವೀರ್ ಹಾಗೂ ವಿಜಯಲಕ್ಷ್ಮೀ ದರ್ಶನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೋರ್ಟ್ ಮೆಟ್ಟಿಲೇರಿದ್ದು, ಧನ್ವೀರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಧನ್ವೀರ್ ವಿರುದ್ಧ ವಿಜಯಲಕ್ಷ್ಮೀ ದರ್ಶನ್ ಬೆಂಗಳೂರು ನಗರದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದೂರು ದಾಖಲು ಮಾಡಿದ್ದಾರೆ.
ಬೆಂಗಳೂರಿನ 37ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಈ ದೂರು ಸಲ್ಲಿಸಲಾಗಿದೆ. ದೂರಿನಲ್ಲಿ ನಟ ಧನ್ವೀರ್ ಅವರು ತಮ್ಮ ವಿರುದ್ಧ ಮಾನನಷ್ಟ ಆಗುವಂತಹ ಹೇಳಿಕೆಗಳನ್ನು ನೀಡಿದ್ದು, ಆ ಹೇಳಿಕೆಗಳನ್ನು ಮಾಧ್ಯಮ ಹಾಗೂ ಸಾರ್ವಜನಿಕವಾಗಿ ಪ್ರಕಟಿಸಿ ಪ್ರಸಾರ ಮಾಡಲಾಗಿದೆ ಎಂದು ವಿಜಯಲಕ್ಷ್ಮೀ ಆರೋಪಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 356(2) ರ ಅಡಿಯಲ್ಲಿ ಮಾನನಷ್ಟ ಆರೋಪ ಹೊರಿಸಲಾಗಿದ್ದು, ಆರೋಪಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ ದಾಖಲೆಗಳು, ಆಡಿಯೋ/ವೀಡಿಯೋ ರೆಕಾರ್ಡಿಂಗ್ಗಳನ್ನು ಸೂಕ್ತ ಸಾಕ್ಷ್ಯವಾಗಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ವಿಜಯಲಕ್ಷ್ಮೀ ಮನವಿ ಮಾಡಿದ್ದಾರೆ.
ಜೊತೆಗೆ, ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ವಿಚಾರಣೆಗೆ ಅವಕಾಶ ನೀಡಬೇಕು ಹಾಗೂ ಬಿಎನ್ಎಸ್ ಸೆಕ್ಷನ್ 222(1) ರ ಅಡಿಯಲ್ಲಿ ಈ ಖಾಸಗಿ ದೂರನ್ನು ಪರಿಗಣಿಸಿ, ಆರೋಪಿ ಧನ್ವೀರ್ ವಿರುದ್ಧ ಸೆಕ್ಷನ್ 227 ರ ಅಡಿಯಲ್ಲಿ ಸಮನ್ಸ್ ಜಾರಿಗೊಳಿಸಬೇಕೆಂದು ನ್ಯಾಯಾಲಯಕ್ಕೆ ಕೋರಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದಾಗ ಧನ್ವೀರ್ ಅವರು ವಿಜಯಲಕ್ಷ್ಮೀ ಬೆಂಬಲಕ್ಕೆ ನಿಂತಿದ್ದರು. ಈ ವೇಳೆ ದರ್ಶನ್ ಅವರನ್ನು ಬಿಡಿಸಿಕೊಂಡು ಬರಲು ಭಾರಿ ಪ್ರಮಾಣದಲ್ಲಿ ಹಣ ಪಡೆದು ಏಣೂ ಮಾಡದೇ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ವೈಮನಸ್ಸು ಮೂಡಿದೆ ಎಂದು ವರದಿಯಾಗಿದೆ. ಆದರೆ, ಇದಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಆದರೆ, ಇತ್ತೀಚೆಗೆ ಧನ್ವೀರ್ ಅವರು ವಿಜಯಲಕ್ಷ್ಮೀ ವಿರುದ್ಧ ಹಲವು ಆರೋಪ ಮಾಡಿದ್ದಾರೆ. ‘ವಿಜಯಲಕ್ಷ್ಮಿ ಅವರಿಗೆ ದರ್ಶನ್ ಜೈಲಿನಿಂದ ಹೊರ ಬರೋದೇ ಇಷ್ಟ ಇಲ್ಲ’ ಎಂದು ಹೇಳಿದ್ದರು. ಅದೇ ರೀತಿ ಧನ್ವೀರ್ ಮೇಲೆ ಮೋಸ ಮಾಡಿದ ಆರೋಪವನ್ನು ವಿಜಯಲಕ್ಷ್ಮಿ ಹೊರಿಸಿದ್ದಾರೆ. ಧನ್ವೀರ್ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ವಿಚಾರವಾಗಿ ಇದೀಗ ವಿಜಯಲಕ್ಷ್ಮೀ ಕ್ರಿಮಿನಲ್ ಮಾನನಷ್ಟ ಕೇಸ್ ಹಾಕಿದ್ದಾರೆ.

