ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಮಧ್ಯಾಹ್ನ ಆಚರಿಸಲು ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಜಾಸೇವಾ ಅಭಿಯಾನ ಸಭೆಗಳ ಆಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದ್ದು, ಕಾರ್ಯಕ್ರಮವನ್ನು ಸಮರ್ಪಕವಾಗಿ ನಡೆಸಲು ಸೂಚಿಸಲಾಗಿದೆ.
ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಸ್ವೀಕರಿಸಿ, ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ರಾಜ್ಯಾದ್ಯಂತ ‘ಪ್ರಜಾಸೇವಾ ಆಂದೋಲನ’ ಸಭೆಗಳನ್ನು ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸೆಪ್ಟೆಂಬರ್ 5ರಿಂದ ಎಲ್ಲಾ ಜಿಲ್ಲೆಗಳಲ್ಲಿ ಪ್ರಜಾಸೇವಾ ಅಭಿಯಾನ ಸಭೆಗಳನ್ನು ಆರಂಭಿಸಲು ಸೂಚನೆ ನೀಡಲಾಗಿದೆ.
ಆಗಸ್ಟ್ 27ರಂದು ಸಂಜೆ 5 ಗಂಟೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಭೆಯಲ್ಲಿ ಈ ಕುರಿತು ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.
ವಿಜಯನಗರ ಜಿಲ್ಲೆಯಲ್ಲಿ ಪ್ರಾಯೋಗಿಕ ಚಾಲನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 5ರಂದು ವಿಜಯನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಪ್ರಜಾಸೇವಾ ಅಭಿಯಾನ ಸಭೆಗೆ ಚಾಲನೆ ನೀಡಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಸೆಪ್ಟೆಂಬರ್ 5ರಿಂದ ಪ್ರಜಾಸೇವಾ ಅಭಿಯಾನ ಸಭೆಗಳನ್ನು ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಸಭೆ
ಪ್ರಜಾಸೇವಾ ಆಂದೋಲನ ಸಭೆಗಳನ್ನು ಬೆಳಗ್ಗೆ 11 ಗಂಟೆಗೆ ಆರಂಭಿಸಿ, ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಳಿಸಲು ಸೂಚಿಸಲಾಗಿದೆ. ಅದೇ ದಿನ ಮಧ್ಯಾಹ್ನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಶಾಸಕರೊಂದಿಗೆ ಸಮನ್ವಯಕ್ಕೆ ಸೂಚನೆ
ಎಲ್ಲಾ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ಶಾಸಕರೊಂದಿಗೆ ಸಮನ್ವಯ ಸಾಧಿಸಿ ಪ್ರಜಾಸೇವಾ ಆಂದೋಲನ ಸಭೆಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು. ಈ ಸಂಬಂಧ ಈಗಾಗಲೇ ಸಿದ್ಧಪಡಿಸಿ ಕಳುಹಿಸಲಾಗಿರುವ ಗೂಗಲ್ ಶೀಟ್‌ನಲ್ಲಿ ಸಭೆಗಳ ದಿನಾಂಕ ಹಾಗೂ ಹೋಬಳಿಗಳ ವಿವರಗಳನ್ನು ನಮೂದಿಸಿ ಕ್ಯಾಲೆಂಡರ್ ಸಿದ್ಧಪಡಿಸಿ ಅಪ್‌ಲೋಡ್ ಮಾಡುವಂತೆ ಸೂಚಿಸಲಾಗಿದೆ.
ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ
ರಾಜ್ಯಾದ್ಯಂತ ಪ್ರಜಾಸೇವಾ ಅಭಿಯಾನ ಸಭೆಗಳನ್ನು ಪರಿಣಾಮಕಾರಿಯಾಗಿ ಆಯೋಜಿಸಿ, ಸಾರ್ವಜನಿಕರಿಂದ ಬರುವ ಕುಂದುಕೊರತೆಗಳನ್ನು ತ್ವರಿತವಾಗಿ ಸ್ವೀಕರಿಸಿ, ಸಾಧ್ಯವಾದಷ್ಟು ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಮೂಲಕ ಸರ್ಕಾರದ ಸೇವೆಗಳು ಹಾಗೂ ಯೋಜನೆಗಳು ನೇರವಾಗಿ ಜನರಿಗೆ ತಲುಪುವಂತೆ ಮಾಡುವ ಜೊತೆಗೆ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
📄 Official Documents / Supporting Documents

