ಬೆಂಗಳೂರು: ವಾಣಿಜ್ಯ ಸಿಲಿಂಡರ್ ಗೆ ನೋಂದಣಿ ಕಡ್ಡಾಯ ಮಾಡಲಾಗಿದೆ. ಕಾಳಸಂತೆಯಲ್ಲಿ ಮಾರಾಟ ತಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಮಾತನಾಡಿದ ಸಚಿವರು, ಯುದ್ಧದ ಪರಿಣಾಮ ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಉಂಟಾಗಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿದಿನದ ಬೇಡಿಕೆಯ ಶೇಕಡ 20ರಷ್ಟು ಸಿಲಿಂಡರ್ ಪೂರೈಸಲಾಗುವುದು. ಕಾಳಸಂತೆ ಮಾರಾಟದ ಕಡೆಗೆ ವಾಣಿಜ್ಯ ಬಳಕೆದಾರರು ಗೇಲ್ ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದ ನಂತರ ವಾಣಿಜ್ಯ ಬಳಕೆದಾರರಿಗೆ ಶೇಕಡ 20ರಷ್ಟು ಸಿಲಿಂಡರ್ ಮಂಜೂರು ಮಾಡಿದೆ. ಪ್ರತಿದಿನ ಶಿಕ್ಷಣ ಸಂಸ್ಥೆಗಳಿಗೆ 4200, ಸರ್ಕಾರಿ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ ಸೇರಿ ಇನ್ನಿತರೆ ಬಳಕೆದಾರರಿಗೆ 1200, ಕೃಷಿ ಸಂಬಂಧಿತ ಬಳಕೆದಾರರಿಗೆ 500, ಹೋಟೆಲ್ ಸೇರಿ ಇನ್ನಿತರ ವಾಣಿಜ್ಯ ಬಳಕೆದಾರರಿಗೆ 10 ಸಾವಿರ ಸಿಲಿಂಡರ್ ನೀಡಲಾಗುವುದು. ತುರ್ತು ಪರಿಸ್ಥಿತಿಗೆ 205 ಸಿಲಿಂಡರ್ ಗಳನ್ನು ಕಾಯ್ದಿರಿಸಲಾಗುವುದು. ಒಟ್ಟು 16,105 ಸಿಲಿಂಡರ್ ಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕಾಳಸಂತೆ ಮಾರಾಟ ತಡೆಗೆ ಎಲ್ಲಾ ವಾಣಿಜ್ಯ ಬಳಕೆದಾರರು ಗೇಲ್ ನಲ್ಲಿ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ನೊಂದಾಯಿಸುವುದು ಕಡ್ಡಾಯವಾಗಿದೆ. ವಾರದಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ.

