ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಪ್ರತಿನಿಧಿಸುವ ಮಾಧ್ಯಮ ಸಂಸ್ಥೆಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರಬೇಕು.
ಮುಖ್ಯಮಂತ್ರಿಗಳು 2024-25 ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆ ಘೋಷಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು.
ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆಯ ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಜಿಲ್ಲಾ ವ್ಯಾಪ್ತಿಗೆ ಉಚಿತವಾಗಿ ಸಂಚರಿಸಬಹುದು.
*ಅರ್ಹತೆ, ಅಗತ್ಯವಿರುವ ದಾಖಲೆಗಳು:* ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸುವವರು ತಮ್ಮ ಸ್ವಯಂ ಘೋಷಣಾ ಪತ್ರ ಹಾಗೂ ಪೂರ್ಣಾವಧಿ, ಅರೇಕಾಲಿಕ ವರದಿಗಾರರಾಗಿ ನೇಮಕವಾಗಿದ್ದಲ್ಲಿ, ನೇಮಕಾತಿ ಪತ್ರ ಮತ್ತು ಸಂಪಾದಕರ ಅಥವಾ ಮುಖ್ಯಸ್ಥರ ಶೀಫಾರಸ್ಸು ಪತ್ರವನ್ನು ಲಗತ್ತಿಸಬೇಕು. ಹಾಗೂ ತಾವು ಕರ್ತವ್ಯ ನಿರ್ವಹಿಸುವ ಸಂಸ್ಥೆಯಿಂದ ಪಡೆಯುತ್ತಿರುವ ಲೈನೇಜ್ ಅಥವಾ ಸಂಭಾವನೆ ಬಗ್ಗೆ ಕಳೆದ 11 ತಿಂಗಳ ಅವಧಿಯ ಬ್ಯಾಂಕ್ ಖಾತೆಯ ವಿವರಗಳು, ಸಂಬಂಧಿತ ದಾಖಲೆಗಳನ್ನು ಒದಗಿಸಬೇಕು. ಸೇವಾನುಭವ ಪ್ರಮಾಣ ಪತ್ರ, ತಹಶೀಲ್ದಾರರಿಂದ ಪಡೆದ ವಾಸಸ್ಥಳದ ಪ್ರಮಾಣ ಪತ್ರ ಲಗತ್ತಿಸಬೇಕು.
ಉಪಗ್ರಹ ಆಧಾರಿತ ವಿದ್ಯುನ್ಮಾನ ವಾಹಿನಿಗಳ ವರದಿಗಾರರು ತಾಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಪ್ರತಿ ತಾಲ್ಲೂಕಿಗೆ ಓರ್ವ ಕ್ಯಾಮರಾಮ್ಯಾನ್ ಹಾಗೂ ಓರ್ವ ವರದಿಗಾರಿಗೆ ಅವರು ಕರ್ತವ್ಯ ನಿರ್ವಹಿಸುವ ಸಂಸ್ಥೆಯ ಮುಖ್ಯಸ್ಥರ ಶಿಫಾರಸ್ಸು ಮೂಲಕ ಬಸ್ ಪಾಸ್ ಪಡೆಯಬಹುದಾಗಿದೆ.
ರಾಜ್ಯಮಟ್ಟದ ಪತ್ರಿಕೆಗಳಿಗೆ ಸಂಬಂಧಿಸಿದಂತೆ, ರಾಜ್ಯದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಸೇರಿ 15 ಪತ್ರಿಕೆಗಳಿದ್ದು, ಜಿಲ್ಲೆಗಳಲ್ಲಿ ರಾಜ್ಯಮಟ್ಟದ ಪತ್ರಿಕೆಗಳ ಸಂಸ್ಥೆಯ ಮುಖ್ಯಸ್ಥರು ಸೂಚಿಸುವ ತಾಲೂಕಿಗೆ ಓರ್ವ ವರದಿಗಾರನಂತೆ ಗ್ರಾಮೀಣ ಬಸ್ ಪಾಸ್ ನೀಡಲಾಗುವುದು.
ಜಿಲ್ಲಾಮಟ್ಟದ ಪತ್ರಿಕೆಗಳ ಸಂಪಾದಕರು ಮಾಧ್ಯಮ ಪ್ರಮಾಣ ಪತ್ರ ಪಡೆದಿರದ್ದರೆ, ಸಂಪಾದಕರು ಅಥವಾ ಸಂಪಾದಕರು ಶಿಫಾರಸ್ಸು ಮಾಡುವ ಜಿಲ್ಲೆಯ ಓರ್ವ ವರದಿಗಾರರಿಗೆ ಗ್ರಾಮೀಣ ಬಸ್ ಪಾಸ್ ನೀಡಲಾಗುತ್ತದೆ.
ಪ್ರಾಧೇಶಿಕ ಪತ್ರಿಕೆಗಳ ವರದಿಗಾರರಿಗೆ ಪತ್ರಿಕೆಗಳ ಪುಟಗಳ ಸಂಖ್ಯೆ ಆಧರಿಸಿ 6 ಪುಟಗಳ ಪತ್ರಿಕೆಗೆ ಸಂಪಾದಕರು ಶಿಫಾರಸ್ಸು ಮಾಡುವ ಒಬ್ಬ ವರದಿಗಾರ ಹಾಗೂ ಒಬ್ಬ ಛಾಯಾಗ್ರಾಹಕ ಮತ್ತು 8 ಅಥವಾ ಹೆಚ್ಚು ಪುಟಗಳಿದ್ದರೆ, ಸಂಪಾದಕರು ಶಿಫಾರಸ್ಸು ಮಾಡುವ ಇಬ್ಬರು ವರದಿಗಾರರು ಹಾಗೂ ಒಬ್ಬ ಛಾಯಾಗ್ರಾಹಕ ಅಥವಾ ಛಾಯಾಗ್ರಾಹಕನ ಬದಲಿಗೆ ಒಬ್ಬ ವರದಿಗಾರನಿಗೆ ಗ್ರಾಮೀಣ ಬಸ್ ಪಾಸ್ ಪಡೆಯಲು ಅವಕಾಶವಿದೆ.
ಅರ್ಜಿ ಸಲ್ಲಿಕೆಯಾಗುವ ಅರ್ಜಿಗಳನ್ನು ಜಿಲ್ಲಾ ಹಂತದಲ್ಲಿ ಪರಿಶೀಲಿಸಿ, ಅಗತ್ಯ ದಾಖಲೆಗಳಿದ್ದಲ್ಲಿ, ಅರ್ಜಿಯನ್ನು ಕೇಂದ್ರ ಕಚೇರಿಗೆ ವರ್ಗಾಯಿಸಲಾಗುತ್ತದೆ. ನಂತರ ರಾಜ್ಯಮಟ್ಟದ ಆಯ್ಕೆ ಸಮಿತಿ ಪರಿಶೀಲಿಸಿ, ಆಯ್ಕೆಯಾದ ಪತ್ರಕರ್ತರಿಗೆ ಗ್ರಾಮೀಣ ಬಸ್ ಪಾಸ್ ಪೂರೈಸಲಾಗುತ್ತದೆ.
ಸಾಮಾನ್ಯ ಮನರಂಜನಾ ಹಾಗೂ ಇತರೆ ಪ್ರಕಾರಗಳ ವಾಹಿನಿಗಳ ಪ್ರತಿನಿಧಿಗಳಿಗೆ, ನಿಯತಕಾಲಿಕ ಪತ್ರಿಕೆಗಳಿಗೆ, ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಮತ್ತು ಮಾನ್ಯತಾ ಪತ್ರ ಹೊಂದಿರುವ ಪತ್ರಕರ್ತರಿಗೆ ಗ್ರಾಮೀಣ ಬಸ್ ಪಾಸ್ ನೀಡಲು ಅವಕಾಶವಿಲ್ಲ.
ಆಸಕ್ತ ಹಾಗೂ ಅರ್ಹ ಪತ್ರಕರ್ತರು ತಮ್ಮ ಸಮೀಪದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ತೆರಳಿ ಸೇವಾಸಿಂಧು ಪೋರ್ಟಲ್ ನಲ್ಲಿ ಆನ್ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು. ಅಪ್ಲೋಡ್ ಮಾಡಿದ ದಾಖಲೆಗಳು ಹಾಗೂ ಆನ್ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ತಮ್ಮ ಜಿಲ್ಲೆಯ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಗೆ ಸ್ವಯಂ ದೃಢೀಕರಿಸಿ, ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.