ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಲ್ಲಿ 800 ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲು ಸರ್ಕಾರ ತೀರ್ಮಾನಿಸಿದೆ.
ಶಾಲಾವಾರು ಪ್ರತ್ಯೇಕ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಸಂಸ್ಥೆ ಗುರುತಿಸುವ ಸಂಬಂಧ ಟೆಂಡರ್ ಕರೆಯಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಅನುಮತಿ ನೀಡಲಾಗಿದೆ. 800 ಶಾಲೆಗಳ ಉನ್ನತಿಕರಣಕ್ಕೆ ಅಂದಾಜು 3200 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ. ಈ ಮೊತ್ತಕ್ಕೆ ಅನುಗುಣವಾಗಿ ಸೂಕ್ತವಾದ ಡಿಪಿಆರ್ ತಯಾರಿಸಬೇಕು. ಇದಕ್ಕೆ 18 ಕೋಟಿ ರೂಪಾಯಿ ವೆಚ್ಚದಲ್ಲಿ ಪಾರದರ್ಶಕವಾಗಿ ಟೆಂಡರ್ ಕರೆಯಬೇಕು. ಟೆಂಡರ್ ಮೂಲಕ ಗುರುತಿಸಿದ ಸಂಸ್ಥೆ ಎರಡು ತಿಂಗಳೊಳಗೆ ಡಿಪಿಆರ್ ಸಿದ್ಧಪಡಿಸಿ ನೀಡಬೇಕು ಎಂದು ಸರ್ಕಾರ ಸೂಚಿಸಿದೆ.
ಪ್ರತಿ ಕೆಪಿಎಸ್ ಶಾಲೆಯಲ್ಲಿ ಎಲ್.ಕೆ.ಜಿ.ಯಿಂದ 12ನೇ ತರಗತಿಯವರೆಗೆ, ಪ್ರತಿ ತರಗತಿಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮಕ್ಕೆ ಎರಡು ಪ್ರತ್ಯೇಕ ತರಗತಿ ನಡೆಸಲು ಮತ್ತು ಕನಿಷ್ಠ 1200 ವಿದ್ಯಾರ್ಥಿಗಳು ವ್ಯಾಸಂಗ ಮಾಡುವಂತಿರಬೇಕು ಎಂದು ಹೇಳಲಾಗಿದೆ.

