HomeKarnatakaBIG NEWS: ಮನರೇಗಾ ಯೋಜನೆ ಮರುಸ್ಥಾಪನೆಗೆ ಹೋರಾಟ: ಸಿಎಂ ಸಿದ್ಧರಾಮಯ್ಯ

BIG NEWS: ಮನರೇಗಾ ಯೋಜನೆ ಮರುಸ್ಥಾಪನೆಗೆ ಹೋರಾಟ: ಸಿಎಂ ಸಿದ್ಧರಾಮಯ್ಯ

ಹುಬ್ಬಳ್ಳಿ: ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಅಣ್ಣಿಗೇರಿಗೆ ಯುಜಿಡಿ ಮಾಡುವ ಕುರಿತು ಬಜೆಟ್ ನಲ್ಲಿ ಚರ್ಚಿಸಲಾಗುವುದು. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸಲಾಗುವುದು.

ಜಲಸಂಪನ್ಮೂಲ ಇಲಾಖೆ ಹಾಗೂ ಕರ್ನಾಟಕ ನೀರಾವರಿ ನಿಗಮ ನಿಯಮಿತವು ಹುಬ್ಬಳ್ಳಿಯ ಶಿರಗುಪ್ಪಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ “ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಯೋಜನೆ”ಗೆ ಶಂಕುಸ್ಥಾಪನೆ ನೆರವೇರಿಸಿ, ಬಳಿಕ ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಣ್ಣೆ ಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಅಲ್ಲದೇ ವಿವಿಧ ಕಾಮಗಾರಿಗಳ ಉದ್ಘಾಟನೆ ಮಾಡಲಾಗಿದೆ. ಶಾಸಕ ಎನ್.ಎಚ್.ಕೋನರಡ್ಡಿ ನಿಷ್ಠಾವಂತ ಕೆಲಸಗಾರ, ಪ್ರಾಮಾಣಿಕ ಶಾಸಕರಾಗಿದ್ದಾರೆ. ರೂ.200 ಕೋಟಿ ವೆಚ್ಚದಲ್ಲಿ ಬೆಣ್ಣೆಹಳ್ಳ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆ ಪ್ರಾರಂಭಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಅವರ ಒತ್ತಾಸೆ ಕಾರಣ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ರೂ.1610 ಕೋಟಿ ಅಂದಾಜು ವೆಚ್ಚದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ವಿಳಂಬ ಮಾಡಿದ ನಂತರ ರೂ.200 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತಿದೆ. ಈ ಹಳ್ಳದ ಪ್ರವಾಹದಿಂದ ಸುಮಾರು 37 ಹಳ್ಳಿಗಳು ಹಾಗೂ 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ತೊಂದರೆ ಉಂಟಾಗುತ್ತಿತ್ತು. ಜೊತೆಗೆ ರೂ.150 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ ಎಂದು ಸುಳ್ಳು ಹರಡಲಾಗುತ್ತಿದೆ. ಆದರೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. 2018 ರಲ್ಲಿ ಸುಪ್ರೀಂ ಕೋರ್ಟ್ ಕಳಸಾ ಬಂಡೂರಿ ಯೋಜನೆಗೆ ಒಪ್ಪಿಗೆ ಸೂಚಿಸಿದೆ. ಈಗಾಗಲೇ ಕಳಸಾ ಬಂಡೂರಿ ಯೋಜನೆಗೆ ಟೆಂಡರ್ ಕರೆದು ಏಜೆನ್ಸಿಗೆ ಒಪ್ಪಿಸಲಾಗಿದೆ. ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ನಾಳೆನೇ ಕಾಮಗಾರಿ ಆರಂಭಿಸಲಾಗುವುದು. ಕೇಂದ್ರ ಸರ್ಕಾರದಿಂದ ಅನುಮತಿ ದೊರೆಯಬೇಕಿದೆ. ಕೇಂದ್ರ ವನ್ಯಜೀವಿ ಮಂಡಳಿಯು ಬೇಗನೆ ಅನುಮತಿ ನೀಡಬೇಕು ಎನ್ನುವುದು ನಮ್ಮ ಒತ್ತಾಯ ಎಂದರು.

ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸರ್ಕಾರದಿಂದ ನಿಂತು ಹೋಗಿದೆ. ಕೇಂದ್ರ ಸರ್ಕಾರ ಕೂಡಲೇ ಗೆಜೆಟ್ ನೋಟಿಫಿಕೇಶನ್ ಮಾಡಬೇಕು. ಮೇಕೆದಾಟು ಯೋಜನೆಗೆ ಸಹ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಈಗಾಗಲೇ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. 65 ಟಿಎಂಸಿ ಕುಡಿಯುವ ನೀರಿನ ಯೋಜನೆ ಇದಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ರೂ.5300 ಕೋಟಿ ಕೊಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಯಾವುದೇ ಹಣ ಇದುವರೆಗೂ ನೀಡಿಲ್ಲ. ರಾಷ್ಟ್ರೀಯ ಯೋಜನೆಯಾಗಿ ಮಾಡುತ್ತೇವೆ ಎಂದು ಬಣ್ಣಿಸಿದ್ದರು ಎಂದರು.

2005 ರಲ್ಲಿ ಮನರೇಗಾ ಯೋಜನೆ ಜಾರಿ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್ ನಲ್ಲಿ ಈ ಯೋಜನೆಯನ್ನು ರದ್ದು ಮಾಡಿದೆ. ಈ ಮೂಲಕ ಯುವಕರಿಗೆ, ಮಹಿಳೆಯರಿಗೆ, ಕೆಲಸವಿಲ್ಲದವರಿಗೆ ಕೆಲಸ ಕೊಡುವ ಯೋಜನೆಯನ್ನು ಕೈ ಬಿಡಲಾಗಿದೆ ಎಂದರು.

ನಾವು ನಂಬಿಕೆ ಇಟ್ಟಿಕೊಂಡಿದ್ದು ಮನುಷ್ಯ ಧರ್ಮ, ಮಾನವೀಯತೆ ಧರ್ಮ. ಬಸವಣ್ಣನವರು ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ.‌.. ಎಂದು ಹೇಳಿದ್ದಾರೆ. ಸುಮಾರು 1.16 ಲಕ್ಷ ಕೋಟಿ ಹಣವನ್ನು ಗ್ಯಾರಂಟಿ‌ ಯೋಜನೆಗೆ ವ್ಯಯಿಸಲಾಗಿದೆ. ಪ್ರತಿ ಕುಟಂಬಕ್ಕೆ 4-5 ಸಾವಿರ ಪ್ರತಿ ತಿಂಗಳು ನೀಡಲಾಗುತ್ತಿದೆ. ವರ್ಷಕ್ಕೆ 50 ಸಾವಿರ ಹಣ ನೇರವಾಗಿ ಮುಟ್ಟಲಿದೆ. ಸುಮಾರು 25 ಸಾವಿರ ಕೋಟಿ ನೀರಾವರಿಗೆ ಖರ್ಚು ಮಾಡಲಾಗಿದೆ. 4.5 ಲಕ್ಷ ಕೋಟಿಗೂ ಹೆಚ್ಚು ಹಣ ಕೇಂದ್ರಕ್ಕೆ ಕೊಡುತ್ತಿದ್ದೇವೆ. ಆದರೆ ಕೇಂದ್ರದಿಂದ 60 ಸಾವಿರ ಕೋಟಿ ಮಾತ್ರ ರಾಜ್ಯಕ್ಕೆ ಮರಳುತ್ತಿದೆ ಎಂದರು.

ಮನರೇಗಾ ಯೋಜನೆಯನ್ನು ಮರುಸ್ಥಾಪನೆ ಮಾಡುವ ನಿಟ್ಟಿನಲ್ಲಿ ಹೋರಾಟ ಮಾಡುತ್ತೇವೆ. ಮನರೇಗಾ ಅಡಿ ಕೆಲಸ ಮಾಡುತ್ತಿದ್ದವರಲ್ಲಿ ಶೇ. 53 ಮಹಿಳೆಯರು, ಶೇ.17 ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ. 11ರಷ್ಟು ಪರಿಶಿಷ್ಟ ಪಂಗಡ ವರ್ಗದವರಿದ್ದಾರೆ. ಇವರೆಲ್ಲರೂ ವಿಬಿ ಜಿ ರಾಮ್ ಜಿ‌ ಇಂದ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದರು

ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್, ಕ್ಷೇತ್ರದ ಶಾಸಕರಾದ ಕೋನರೆಡ್ಡಿ, ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಕೊಳಗೇರಿ ಅಭಿವೃದ್ಧಿ ಮಂಡಳಿ‌ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular