ನವದೆಹಲಿ: ಭಾರತದಲ್ಲಿ ಶೀಘ್ರವೇ ಮಕ್ಕಳ ಜಾಲತಾಣ ಬಳಕೆಗೆ ಬ್ರೇಕ್ ಬೀಳಲಿದೆ. 16 ವರ್ಷದ ಕೆಳಗಿನ ಮಕ್ಕಳಿಗೆ ಜಾಲತಾಣ ಬಳಕೆ ನಿರ್ಬಂಧಿಸಲು ಚಿಂತನೆ ನಡೆದಿದೆ.
ಮಕ್ಕಳ ಮಾನಸಿಕ ಆರೋಗ್ಯ ಮತ್ತು ಆನ್ಲೈನ್ ಸುರಕ್ಷತೆ ಗಮನದಲ್ಲಿಟ್ಟುಕೊಂಡು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿರ್ಬಂಧಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಕುರಿತಾಗಿ ಸರ್ಕಾರ ಸಂಬಂಧಿತರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಎಸ್. ಕೃಷ್ಣನ್ ತಿಳಿಸಿದ್ದಾರೆ.
2025ರ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಿದ್ದು, ಈ ಮೂಲಕ ಇಂತಹ ಮಹತ್ವದ ಕ್ರಮ ಕೈಗೊಂಡ ಮೊದಲ ದೇಶ ಎನಿಸಿಕೊಂಡಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಿದ ಆಸ್ಟ್ರೇಲಿಯಾದ ಕ್ರಮವನ್ನು ದೊಡ್ಡ ಮೈಲುಗಲ್ಲು ಎಂದು ಹೇಳಿದ್ದರು. ವಿಶ್ವಕ್ಕೆ ಸ್ಪೂರ್ತಿದಾಯಕ ನಡೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭಾರತದಲ್ಲಿಯೂ ಇಂತಹ ನಿಯಮ ತರುವುದರ ಮುನ್ಸೂಚನೆ ನೀಡಿದ್ದರು. ಇದೀಗ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿರ್ಬಂಧಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

