ಬೆಂಗಳೂರು: ಗ್ಯಾರಂಟಿ ಯೋಜನೆಗಳ ಆರ್ಥಿಕ ಕಡಿಮೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ನಿಗದಿತ ಮಾನದಂಡ ಉಲ್ಲಂಘಿಸಿ ಪಡೆದುಕೊಂಡಿದ್ದ ಸುಮಾರು 4.50 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿದೆ.
ರದ್ದುಗೊಂಡ ಕಾರ್ಡ್ ದಾರರು ಸಹಜವಾಗಿಯೇ ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಿಂದ ಹೊರಗುಳಿಯಲಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಪ್ರತಿ ತಿಂಗಳು ಸುಮಾರು 110 ಕೋಟಿ ರೂಪಾಯಿಗೂ ಅಧಿಕ ಹಣ ಉಳಿತಾಯವಾಗುತ್ತದೆ.
ರಾಜ್ಯಾದ್ಯಂತ ಆಹಾರ ಇಲಾಖೆ 4.50 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿದೆ. ವಿವಿಧ ಯೋಜನೆಗಳ ಫಲಾನುಭವಿಗಳ ಪಟ್ಟಿಯಿಂದ 14.50 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇವರು ಅಧಿಕ ಆದಾಯ ಹೊಂದಿದವರು ಮತ್ತು ಕುಟುಂಬ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಹೀಗಾಗಿ ಈ ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆ ಪ್ರಯೋಜನ ನಿಂತಿದೆ. ಇದೊಂದೇ ಯೋಜನೆಯಿಂದ ತಿಂಗಳಿಗೆ ಸುಮಾರು 90 ಕೋಟಿ ಉಳಿತಾಯವಾಗುತ್ತದೆ. ಈ ಫಲಾನುಭವಿಗಳಿಗೆ ತಿಂಗಳಿಗೆ 72.50 ಲಕ್ಷ ಕ್ವಿಂಟಲ್ ಪಡಿತರ ವಿತರಿಸಲಾಗುತ್ತಿತ್ತು. ಇದಕ್ಕೆ ವೆಚ್ಚವಾಗುತ್ತಿದ್ದ ಅಂದಾಜು 22 ಕೋಟಿ ರೂಪಾಯಿ ಉಳಿತಾಯವಾಗಿದೆ.
7,76,206 ಬಿಪಿಎಲ್ ಕಾರ್ಡುಗಳನ್ನು ಶಂಕಾಸ್ಪದ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇವು ಕೂಡ ರದ್ದಾಗುವ ಸಾಧ್ಯತೆ ಇದೆ.

