ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್-12ರ ಗ್ರ್ಯಾಂಡ್ ಫಿನಾಲೆಗೆ ಕೌಂಟ್ ಡೌನ್ ಆರಂಭವಾಗಿದೆ. ಅಂತಿಮವಾಗಿ ಬಿಗ್ ಬಾಸ್ ಮನೆಯಲ್ಲಿ ಉಳಿದಿರುವ ಆರು ಸ್ಪರ್ಧಿಗಳಲ್ಲಿ ಗೆಲು ಯಾರಿಗೆ? ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಬಿಗ್ ಬಾಸ್ ನಲ್ಲಿ ಅರ್ಧ ಕೋಟಿ ಒಡೆಯ ಯಾರಾಗಲಿದ್ದಾರೆ? ಬಿಗ್ ಬಾಸ್- 12ರ ಕಿರೀಟ ಯಾರ ಮುಡಿಗೇರಲಿದೆ ಎಂಬುದನ್ನು ನಾಡಿನಾದ್ಯಂತ ಜನರು ಕಾತರದಿಂದ ಕಾಯುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ ಅಂತಿಮ ಸ್ಪರ್ಧಿಗಳಾದ ಗಿಲ್ಲಿ, ಅಶ್ವಿನಿ ಗೌಡ, ರಘು, ಧನುಷ್, ಕಾವ್ಯಾ, ರಕ್ಷಿತಾ ಶೆಟ್ಟಿ ಈ ಆರು ಸ್ಪರ್ಧಿಗಳಲ್ಲಿ ವಿನ್ನರ್ ಯಾರಾಗಲಿದ್ದಾರೆ? ಎಂಬ ಕುತೂಹಲದ ನಡುವೆಯೇ ಆರೂ ಸ್ಪರ್ಧಿಗಳಿಗೆ ಫ್ಯಾನ್ಸ್ ಕ್ರೇಜ್ ಜೋರಾಗಿದೆ. ಬೊಬ್ಬಬ್ಬ ಸ್ಪರ್ಧಿಗಳ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿ ಗೆಲುವಿಗಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅನ್ನದಾನ ಹಾಗೂ ವಿಶೇಷ ಪ್ರಚಾರಗಳನ್ನು ನಡೆಸುತ್ತಿದ್ದಾರೆ. ಚುನಾವಣೆಗಳಲ್ಲಿ ರಾಜಕೀಯ ನಾಯಕರು ನಡೆಸುವ ಪ್ರಚಾರದ ಅಬ್ಬರಕ್ಕೂ ಬಿಗ್ ಬಾಸ್ ಸ್ಪರ್ಧಿಗಳ ಗೆಲುವಿಗಾಗಿ ಅಭಿಮಾನಿಗಳು ನಡೆಸುತ್ತಿರುವ ಪ್ರಚಾರದ ಅಬ್ಬರ, ಕ್ರೇಜ್ ಯಾವುದಕ್ಕೂ ಕಮ್ಮಿಯಿಲ್ಲ.
ಒಂದೆಡೆ ಗಿಲ್ಲಿ ಗೆಲುವಿಗಾಗಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದರೆ, ಮತ್ತೊಂದೆಡೆ ಅಶ್ವಿನಿ ಗೌಡ ಗೆದ್ದು ಬರಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಧನುಷ್, ರಘು, ಕಾವ್ಯಾ, ರಕ್ಷಿತಾ ಅಭಿಮಾನಿಗಳೂ ತಮ್ಮ ನೆಚ್ಚಿನ ಸ್ಪರ್ಧಿಗಾಗಿ ಪೂಜೆ-ಪ್ರಾರ್ಥನೆಗಳಲ್ಲಿ ತೊಡಗಿದ್ದಾರೆ. ಇನ್ನೇನು ಕೆಲವೇ ಸಮಯಗಳಲ್ಲಿ ಬಿಗ್ ಬಾಸ್ ವಿನ್ನರ್ ಯಾರೆಂಬುದು ಅಧಿಕೃತವಾಗಿ ಘೋಷಣೆಯಾಗಲಿದೆ.
ಬಿಗ್ ಬಾಸ್- 12 ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣೆ ಆರಂಭವಾಗಿರುವ ಬೆನ್ನಲ್ಲೇ ನಟ, ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್, ಟ್ವೀಟ್ ಮಾಡಿದ್ದಾರೆ. ಬಿಗ್ ಬಾಸ್ ವಿನ್ನರ್ ಯಾರು ಎಂಬುದು ಇಂದು ಸೂರ್ಯಾಸ್ತದ ಬಳಿಕ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಇಂದಿಗೆ ಬಿಗ್ ಬಾಸ್ ಸೀಜನ್ 12 ಅಂತ್ಯವಾಗಲಿದೆ. ಬಿಗ್ ಬಾಸ್ ಕಾರ್ಯಕ್ರಮದ ತಂತ್ರಜ್ಞರು, ಈ ಅದ್ಭುತ ಪ್ರಯಾಣದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ.

