ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ, ಬಣ ಬಡಿದಾಟ ಮುಂದುವರೆದಿರುವ ನಡುವೆಯೇ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿಯೂ ಸಮನ್ವಯತೆಯ ಕೊರತೆ ಇದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಮೈತ್ರಿ ಮಾಡಿಕೊಂಡಾಗಿನಿಂದಲೂ ಮಿತ್ರ ಪಕ್ಷಗಳ ನಾಯಕರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಹಲವು ಬಾರಿ ಬೆಳಕಿಗೆ ಬಂದಿದೆ. ಇದೀಗ ಬಿಡದಿ ಟೌನ್ ಶಿಪ್ ವಿರೋಧಿಸಿ ನಡೆಸುತ್ತಿರುವ ಪಾದಯಾತ್ತೆ ವಿಚಾರದಲ್ಲಿಯೂ ಗೊಂದಲ ಸ್ಪಷ್ಟವಾಗಿದೆ.
ಬಿಡದಿ ಟೌನ್‌ಶಿಪ್ ವಿರೋಧಿಸಿ ಬಿಜೆಪಿ ಪಾದಯಾತ್ರೆ ನಡೆಸುವುದಾಗಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದ್ದಾರೆ. ಆದರೆ ಪಾದಯಾತ್ರೆ ದಿನಾಂಕ ಶೀಘ್ರದಲ್ಲಿ ತಿಳಿಸುವುದಾಗಿ ಹೇಳಿದ್ದರು. ಈ ನಡುವೆ ಬಿಜೆಪಿಗೂ ಮೊದಲೇ ಜೆಡಿಎಸ್ ಪಾದಯಾತ್ರೆ ದಿನಾಂಕ ಘೋಷಣೆ ಮಾಡಿದೆ. ಜುಲೈ 30, 31 ಮತ್ತು ಆಗಸ್ಟ್ 1 ರಂದು ಸುಮಾರು 38 ಕಿಲೋಮೀಟರ್‌ಗಳ 3 ದಿನಗಳ ಪಾದಯಾತ್ರೆಯನ್ನ ಜೆಡಿಎಸ್ ಘೋಷಣೆ ಮಾಡಿದೆ. ಇದರೊಂದಿಗೆ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಬಿರುಕು ಇರುವುದು ಜಗಜ್ಜಾಹೀರಾದಂತಾಗಿದೆ.
ಬಿಡದಿ ಟೌನ್ ಶಿಪ್ ವಿರೋಧಿಸಿ ಪಾದಯಾತ್ರೆ ಮಾಡುವ ಬಗ್ಗೆ ಜೆಡಿಎಸ್ ಜೊತೆ ಚರ್ಚಿಸಿ ದಿನಾಂಕವನ್ನು ಘೋಷಿಸುವುದಾಗಿ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದರು. ಈ ಬಗ್ಗೆ ಚರ್ಚಿಸಲು ಜೆಡಿಎಸ್ ನಾಯಕರನ್ನು ಸಂಪರ್ಕಿಸಲು ಬಿಜೆಪಿ ನಾಯಕರು ಯತ್ನಿಸಿದ್ದರು. ಆದ್ರೆ, ಸಾಧ್ಯವಾಗಿಲ್ಲ. ಇದರ ನಡುವೆಯೇ ಇಂದು ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ ಘೋಷಿಸಿದೆ. ಬಿಜೆಪಿ ನಾಯಕರ ಚರ್ಚೆಗೂ ಮುನ್ನವೇ ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ ಘೋಷಣೆ ಮಾಡುವ ಅಚ್ಚರಿ ಮೂಡಿಸಿದೆ.
ಜೆಡಿಎಸ್ ಪಾದಯಾತ್ರೆ ಮಾರ್ಗ:
ಜುಲೈ 30 ಬೆಳಗ್ಗೆ-ಬೈರಮಂಗಲ ವೃತ್ತದಿಂದ ಬಿಡದಿ ವೃತ್ತ 8km ಮಧ್ಯಾಹ-ಬಿಡದಿ ವೃತ್ತದಿಂದ ಕ್ರೈಸ್ಟ್ ವಿವಿ- 7 km ಒಟ್ಟು 15 km.
ಜುಲೈ 31 ಬೆಳಗ್ಗೆ- ಕ್ರೈಸ್ಟ್ ವಿವಿ ಗೇಟ್‌ನಿಂದ ಜೆಕೆ ಗ್ರ್ಯಾಂಡ್ ಅರೆನಾ (ನೈಸ್ ಜಂಕ್ಷನ್) 6km ಮಧ್ಯಾಹ್ನ- ನೈಸ್ ಜಂಕ್ಷನ್‌ನಿಂದ ಆರ್.ಆರ್. ನಗರ ಕಮಾನು 10km ಒಟ್ಟು – 16km
ಆಗಸ್ಟ್ 1 ಬೆಳಗ್ಗೆ- ಆರ್.ಆರ್. ಜಂಕ್ಷನ್‌ನಿಂದ ಫ್ರೀಡಂ ಪಾರ್ಕ್ 7 km ಮಧ್ಯಾಹ್ನ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶ.
ಪ್ರತ್ಯೇಕ ಪಾದಯಾತ್ರೆ ಬಗ್ಗೆ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಪ್ರತಿಕ್ರಿಯಿಸಿದ್ದು, ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಪಾದಯಾತ್ರೆ ಮಾಡುವುದಾಗಿ ಹೇಳಿದ್ದೆವು. ಈಗ ಜೆಡಿಎಸ್ ನಾಯಕರು ಪಾದಯಾತ್ರೆ ದಿನಾಂಕ ಘೋಷಿಸಿದ್ದಾರೆ. ಪಾದಯಾತ್ರೆ ವಿಚಾರವಾಗಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.ಟೌನ್‌ಶಿಪ್ ಯೋಜನೆ ವಿಚಾರದಲ್ಲಿ ಇಬ್ಬರದ್ದೂ ಒಂದೇ ನಿಲುವು. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ಮಾಡುತ್ತೇವೆ. ಹೋರಾಟದ ಬಗ್ಗೆ ಉಭಯ ಪಕ್ಷಗಳ ನಾಯಕರು ಚರ್ಚೆಮಾಡ್ತಾರೆ. ಒಂದೇ ಪಾದಯಾತ್ರೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಉಭಯ ನಾಯಕರು ಚರ್ಚಿಸಿ ಶೀಘ್ರ ದಿನಾಂಕ ಘೋಷಣೆ ಮಾಡ್ತೇವೆ ಎಂದು ತಿಳಿಸಿದರು.
ಒಟ್ಟಾರೆ ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಮಿತ್ರ ಪಕ್ಷ ಬಿಜೆಪಿ ನಾಯಕ ಅಭಿಪ್ರಾಯ ಕೇಳದೇ ಜೆಡಿಎಸ್ ಏಕಾಂಗಿಯಾಗಿ ಪಾದಯಾತ್ರೆ ಘೋಷಣೆ ಮಾಡಿದ್ದು, ಉಭಯ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ.

