ಈಗಾಗಲೇ ಜಲಪ್ರಳಯದಿಂದ ತತ್ತರಿಸಿರುವ ನೇಪಾಳದ ಜನರಿಗೆ ಮತ್ತೊಂದು ಪ್ರಕೃತಿ ವಿಕೋಪ ಎದುರಾಗಿದೆ. ನೇಪಾಳ–ಚೀನಾ ಗಡಿಯಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಚೀನಾದ ಸಿಚುವಾನ್ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಏಕಾಏಕಿ ಭೂಮಿ ಕಂಪಿಸಿದೆ.
ಭೂಕಂಪದ ತೀವ್ರತೆಗೆ ಜನರು ಆತಂಕಗೊಂಡು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.1ರಷ್ಟು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿ ಹಾನಿಯಾಗಿರುವ ಕುರಿತು ಸದ್ಯಕ್ಕೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಭೂಕಂಪದ ಕಂಪನದಿಂದ ಲಾಂಗ್‌ಚಾಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಆತಂಕಕ್ಕೊಳಗಾದರು. ಆದರೆ ಪ್ರಾಥಮಿಕ ವರದಿಗಳ ಪ್ರಕಾರ, ಇದುವರೆಗೆ ಯಾವುದೇ ದೊಡ್ಡ ಪ್ರಮಾಣದ ಹಾನಿ ಸಂಭವಿಸಿರುವ ಬಗ್ಗೆ ಮಾಹಿತಿ ಬಂದಿಲ್ಲ.
ಸಿಚುವಾನ್‌ನ ಪ್ರಮುಖ ಪ್ರದೇಶ ಲಾಂಗ್‌ಚಾಂಗ್
ಲಾಂಗ್‌ಚಾಂಗ್ ನಗರವು ಸಿಚುವಾನ್ ಪ್ರಾಂತ್ಯದ ಆಗ್ನೇಯ ಭಾಗದಲ್ಲಿದೆ. ಆಡಳಿತಾತ್ಮಕವಾಗಿ ಇದು ನೆಯ್‌ಜಿಯಾಂಗ್ ವ್ಯಾಪ್ತಿಯಲ್ಲಿರುವ ಕೌಂಟಿ ಮಟ್ಟದ ನಗರವಾಗಿದೆ. ಚೀನಾದ ಚೋಂಗ್‌ಕಿಂಗ್ ಮುನ್ಸಿಪಾಲಿಟಿಯ ಗಡಿಗೆ ಈ ಪ್ರದೇಶ ಸಮೀಪದಲ್ಲಿದೆ.
ಲಾಂಗ್‌ಚಾಂಗ್ ನಗರವು ಚೆಂಗ್ಡು ಮತ್ತು ಚೋಂಗ್‌ಕಿಂಗ್‌ನಂತಹ ಪ್ರಮುಖ ನಗರಗಳ ನಡುವಿನ ಪ್ರದೇಶದಲ್ಲಿದೆ. ಸಿಚುವಾನ್ ಬೇಸಿನ್‌ನಲ್ಲಿರುವ ಈ ನಗರವು ಸಿಚುವಾನ್ ಅನ್ನು ನೆರೆಯ ಪ್ರದೇಶಗಳೊಂದಿಗೆ ಸಂಪರ್ಕಿಸುವ ಪ್ರಮುಖ ಸಾರಿಗೆ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ.
ಮಣಿಪುರದಲ್ಲೂ ಭೂಕಂಪ
ಇದೇ ವೇಳೆ, ಭಾರತದ ಮಣಿಪುರದಲ್ಲೂ ಶುಕ್ರವಾರ ಭೂಕಂಪದ ಕಂಪನಗಳು ದಾಖಲಾಗಿವೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಬೆಳಗ್ಗೆ 10:49ಕ್ಕೆ ಮಣಿಪುರದಲ್ಲಿ ಭೂಮಿ ಕಂಪಿಸಿದ್ದು, 3.6 ತೀವ್ರತೆ ದಾಖಲಾಗಿದೆ.
ಚೀನಾದಲ್ಲಿ ಸಂಭವಿಸಿದ ಭೂಕಂಪಕ್ಕೆ ಹೋಲಿಸಿದರೆ ಮಣಿಪುರದಲ್ಲಿ ದಾಖಲಾಗಿರುವ ಕಂಪನದ ತೀವ್ರತೆ ಕಡಿಮೆಯಾಗಿದೆ. ಸದ್ಯದ ಮಾಹಿತಿಯ ಪ್ರಕಾರ ಮಣಿಪುರದಲ್ಲೂ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದ ದುರಂತದ ಬೆನ್ನಲ್ಲೇ ಚೀನಾ ಮತ್ತು ಭಾರತದ ವಿವಿಧ ಪ್ರದೇಶಗಳಲ್ಲಿ ಭೂಕಂಪದ ಕಂಪನಗಳು ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಸದ್ಯಕ್ಕೆ ಲಾಂಗ್‌ಚಾಂಗ್ ಮತ್ತು ಮಣಿಪುರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ತಿಳಿದುಬಂದಿದೆ. ಸಂಬಂಧಿತ ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

