HomeKarnatakaನಕಲಿ ಜಾತಿ ಪ್ರಮಾಣ ಪತ್ರ ತಡೆಗೆ ‘ಭೋವಿ–ವಡ್ಡರ್’ ಎಂದು ಪ್ರಮಾಣ ಪತ್ರ ನೀಡಿ ಮೀಸಲಾತಿ ಸೌಲಭ್ಯ...

ನಕಲಿ ಜಾತಿ ಪ್ರಮಾಣ ಪತ್ರ ತಡೆಗೆ ‘ಭೋವಿ–ವಡ್ಡರ್’ ಎಂದು ಪ್ರಮಾಣ ಪತ್ರ ನೀಡಿ ಮೀಸಲಾತಿ ಸೌಲಭ್ಯ ದುರುಪಯೋಗಕ್ಕೆ ಕಡಿವಾಣ ಹಾಕಿ: ತಂಗಡಗಿ

ಬೆಂಗಳೂರು-ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವ ಮೂಲಕ ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿ ಸೌಲಭ್ಯ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ, ಭೋವಿ ಸಮುದಾಯದವರಿಗೆ ‘ಭೋವಿ–ವಡ್ಡರ್’ ಎಂದು ನಮೂದಿಸಿ ಜಾತಿ ಪ್ರಮಾಣ ಪತ್ರ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಭೋವಿ ಸಮುದಾಯದ ವಿವಿಧ ಸಮಸ್ಯೆಗಳ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ತಂಗಡಗಿ ಅವರು ಈ ಸೂಚನೆ ನೀಡಿದರು.

ರಾಜ್ಯದ ಉಡುಪಿ ಸೇರಿದಂತೆ ದಕ್ಷಿಣ ಕರ್ನಾಟಕದ ನಾಲ್ಕೈದು ಜಿಲ್ಲೆಗಳಲ್ಲಿ ಬೋಯಿ (ಬೆಸ್ತ) ಸಮುದಾಯದ ಕೆಲವರು ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿ ಸೌಲಭ್ಯ ಪಡೆಯುವ ಉದ್ದೇಶದಿಂದ ಬೋಯಿ ಬದಲಿಗೆ ಬೋವಿ ಎಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಕಂಡುಬಂದಿದೆ ಎಂದು ಸಮುದಾಯದ ಮುಖಂಡರು ಸಭೆಯ ಗಮನಕ್ಕೆ ತಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಂಪ್ರದಾಯಿಕ ಕಸಬು, ಗುರುತಿನಲ್ಲಿ ವ್ಯತ್ಯಾಸ

ಸಾಂಪ್ರದಾಯಿಕ ಕಸಬು, ಗುರುತಿನಲ್ಲಿ ವ್ಯತ್ಯಾಸ

ಭೋವಿ–ವಡ್ಡರ್ ಸಮುದಾಯವು ಸಾಂಪ್ರದಾಯಿಕವಾಗಿ ಕಲ್ಲು ಒಡೆಯುವುದು, ಮಣ್ಣು ತೆಗೆಯುವುದು, ಕೆರೆ–ಬಾವಿ ತೋಡುವುದು ಹಾಗೂ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಶ್ರಮಾಧಾರಿತ ಕಾಯಕಗಳಲ್ಲಿ ತೊಡಗಿಸಿಕೊಂಡಿರುವ ಸಮುದಾಯವಾಗಿದೆ. ಮತ್ತೊಂದೆಡೆ, ಬೋಯಿ (ಬೆಸ್ತ) ಸಮುದಾಯವು ಸಾಂಪ್ರದಾಯಿಕವಾಗಿ ಮೀನುಗಾರಿಕೆ, ದೋಣಿ ನಡೆಸುವುದು ಹಾಗೂ ಪಲ್ಲಕ್ಕಿ ಹೊರುವ ಕಾಯಕದಲ್ಲಿ ತೊಡಗಿಸಿಕೊಂಡು ಬಂದಿದ್ದು, ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಒಳಪಡುತ್ತದೆ.

ಅವರೂ ಶ್ರಮಿಕ ಹಾಗೂ ಹಿಂದುಳಿದ ವರ್ಗವಾದ್ದರಿಂದ ನ್ಯಾಯಯುತವಾಗಿ ಅವರಿಗೆ ಸಿಗಬೇಕಾದ ಸೌಲಭ್ಯ ಸಿಗಬೇಕು. ಆದರೆ ಕೆಲವೇ ಕೆಲವು ಮಂದಿ ನಕಲಿ ಪ್ರಮಾಣಪತ್ರದ ಮೂಲಕ ಬೇರೆ ವರ್ಗದ ಮೀಸಲಾತಿ ಸೌಲಭ್ಯ ಹೈಜಾಕ್ ಗೆ ಯತ್ನಿಸುತ್ತಿದ್ದಾರೆ.

ಹೀಗಾಗಿ ಎರಡೂ ಸಮುದಾಯಗಳ ಸಾಂಪ್ರದಾಯಿಕ ಕಸಬು ಹಾಗೂ ಸಾಮಾಜಿಕ ಗುರುತಿನಲ್ಲಿರುವ ವ್ಯತ್ಯಾಸವನ್ನು ಪರಿಗಣಿಸಿ, ಭೋವಿ ಸಮುದಾಯಕ್ಕೆ ‘ಭೋವಿ–ವಡ್ಡರ್’ ಎಂದು ಸ್ಪಷ್ಟವಾಗಿ ನಮೂದಿಸಿರುವ ಜಾತಿ ಪ್ರಮಾಣ ಪತ್ರ ನೀಡಬೇಕು. ಇದರಿಂದ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎಂದು ಸಚಿವ ತಂಗಡಗಿ ಹೇಳಿದರು.

ಸಿದ್ದರಾಮೇಶ್ವರ ಭವನಕ್ಕೆ ಮನವಿ

*ಸಿದ್ದರಾಮೇಶ್ವರ ಭವನಕ್ಕೆ ಮನವಿ*: ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಸಮುದಾಯಗಳಿಗೆ ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಮ್ ಭವನ ಸೇರಿದಂತೆ ಸಮುದಾಯ ಭವನಗಳನ್ನು ನಿರ್ಮಿಸಿಕೊಡುತ್ತಿರುವ ಮಾದರಿಯಲ್ಲಿ, ಭೋವಿ ಸಮುದಾಯಕ್ಕೂ ‘ಸಿದ್ದರಾಮೇಶ್ವರ ಭೋವಿ ಭವನ’ ನಿರ್ಮಿಸಿಕೊಡಬೇಕು ಎಂದು ಸಚಿವ ತಂಗಡಗಿ ಅವರು ಮನವಿ ಮಾಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಕೆ.ಎಚ್. ಮುನಿಯಪ್ಪ ಅವರು, ರಾಜ್ಯದ ಹತ್ತು ಜಿಲ್ಲಾ ಕೇಂದ್ರಗಳಲ್ಲಿ ಗ್ರಂಥಾಲಯ ಹಾಗೂ ತರಬೇತಿ ಕೇಂದ್ರಗಳನ್ನು ಒಳಗೊಂಡ ಸಮುದಾಯ ಭವನಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಶಿಕ್ಷಣದಲ್ಲಿ ರೋಸ್ಟರ್ ಪದ್ಧತಿ ಜಾರಿಗೆ ಆಗ್ರಹ

ಶಿಕ್ಷಣದಲ್ಲಿ ರೋಸ್ಟರ್ ಪದ್ಧತಿ ಜಾರಿಗೆ ಆಗ್ರಹ

ನೇರ ನೇಮಕಾತಿಯಲ್ಲಿ ರೋಸ್ಟರ್ ಪದ್ಧತಿ ಜಾರಿಯಲ್ಲಿದ್ದರೂ, ಶಿಕ್ಷಣ ಕ್ಷೇತ್ರದಲ್ಲಿ ಇದೇ ರೀತಿಯ ರೋಸ್ಟರ್ ವ್ಯವಸ್ಥೆ ಇಲ್ಲ. ಇದರಿಂದ ಭೋವಿ ಸಮುದಾಯಕ್ಕೆ ಶೈಕ್ಷಣಿಕ ಅವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂದು ಸಭೆಯಲ್ಲಿ ಮುಖಂಡರು ಸಚಿವರ ಗಮನಕ್ಕೆ ತಂದರು.

ಈ ಸಮಸ್ಯೆಯನ್ನು ಪರಿಶೀಲಿಸಿ ಒಂದು ವಾರದೊಳಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಚ್. ಮುನಿಯಪ್ಪ ಅವರು ಭರವಸೆ ನೀಡಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಭೋವಿ ಸಮುದಾಯದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular