ನವದೆಹಲಿ: ಸಹಕಾರ ತತ್ವದಡಿ ಕಾರ್ಯನಿರ್ವಹಿಸುವ ದೇಶದ ಮೊದಲ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಭಾರತ್ ಟ್ಯಾಕ್ಸಿಗೆ ಅಧಿಕೃತ ಚಾಲನೆ ಸಿಕ್ಕಿದೆ.
ಸಹಕರ ಸಚಿವ ಅಮಿತ್ ಶಾ ಗುರುವಾರ ಭಾರತ್ ಟ್ಯಾಕ್ಸಿಗೆ ಚಾಲನೆ ನೀಡಿದ್ದಾರೆ. ಭಾರತ್ ಆ್ಯಪ್ ಮೂಲಕ ಇದು ಕಾರ್ಯನಿರ್ವಹಿಸಲಿದೆ. ಇದರ ಮೂಲಕ ಗ್ರಾಹಕರು ಕಾರ್ ಗಳು, ಆಟೋ ರಿಕ್ಷಾ ಮತ್ತು ಬೈಕ್ ಟ್ಯಾಕ್ಸಿಗಳನ್ನು ಬಾಡಿಗೆ ಪಡೆದುಕೊಳ್ಳಬಹುದು. ಗ್ರಾಹಕರು ನೀಡುವ ಸಂಪೂರ್ಣ ಹಣ ಯಾವುದೇ ಕಮಿಷನ್ ಇಲ್ಲದೆ ನೇರವಾಗಿ ಚಾಲಕರಿಗೆ ಸಂದಾಯವಾಗುತ್ತದೆ. ಇತರೆ ಖಾಸಗಿ ಟ್ಯಾಕ್ಸಿ ಸೇವೆಗಳಂತೆ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದ್ದಾಗ ಹೆಚ್ಚಿನ ಶುಲ್ಕ ಅನ್ವಯವಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಗುಜರಾತ್ ಮತ್ತು ದೆಹಲಿಯಲ್ಲಿ ಎರಡು ತಿಂಗಳ ಪ್ರಾಯೋಗಿಕ ಕಾರ್ಯಾಚರಣೆ ನಂತರ ದೇಶಾದ್ಯಂತ ಭಾರತ್ ಟ್ಯಾಕ್ಸಿ ಸೇವೆಯನ್ನು ವಿಸ್ತರಿಸಲಾಗುವುದು.
ಈ ಭಾರತ್ ಟ್ಯಾಕ್ಸಿ ಸೇವೆಯಲ್ಲಿ ಚಾಲಕರೇ ಮಾಲೀಕರಾಗಿರುತ್ತಾರೆ. 100 ರೂ. ಗಳಿಕೆಯಾದರೆ ಅದರಲ್ಲಿ 80 ರೂ. ಸಾರಥಿಗಳ ಖಾತೆಗೆ ಜಮಾ ಆಗುತ್ತದೆ. 20 ರೂ.ಗಳನ್ನು ವೇದಿಕೆ ಇಟ್ಟುಕೊಳ್ಳುತ್ತದೆ. ಆ 20 ರೂ. ಒಡೆತನವೂ ಚಾಲಕರದ್ದೇ ಆಗಿರುತ್ತದೆ. ಭಾರತ್ ಟ್ಯಾಕ್ಸಿಗೆ ಯಾವುದೇ ತೆರಿಗೆ ಇರುವುದಿಲ್ಲ. ಕಮಿಷನ್ ಕೊಡುವಂತಿಲ್ಲ. ಬರುವ ಲಾಭವನ್ನು ಚಾಲಕರಿಗೆ ಹಂಚಿಕೆ ಮಾಡಲಾಗುವುದು. ಚಾಲಕರಿಗೆ 5 ಲಕ್ಷ ರೂ. ಅಪಘಾತ ವಿಮೆ ಹಾಗೂ 5 ಲಕ್ಷ ರೂ. ಮೊತ್ತದ ಕುಟುಂಬ ಆರೋಗ್ಯ ವಿಮೆ ಇರಲಿದೆ. ಸಹಕಾರ ಟ್ಯಾಕ್ಸಿ ಕೋ ಆಪರೇಟಿವ್ ಲಿಮಿಟೆಡ್ ನಿಂದ ಭಾರತ್ ಟ್ಯಾಕ್ಸಿಯನ್ನು ನಿರ್ವಹಿಸಲಾಗುವುದು. ಈಗಾಗಲೇ 3 ಲಕ್ಷಕ್ಕೂ ಅಧಿಕ ಚಾಲಕರು ಸೇರ್ಪಡೆಯಾಗಿದ್ದಾರೆ.

