ಶಿವಮೊಗ್ಗ: ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಯೋಗಾತ್ಮಕವಾಗಿ ನೀರನ್ನು ಹರಿಸಲು ಸರ್ಕಾರ ಆದೇಶಿಸಿದೆ.
ನೀರು ಬಿಡುಗಡೆ ದಿನಾಂಕ: ಸೆಪ್ಟೆಂಬರ್ 06 ರಿಂದ ಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತಿದೆ.
ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಯಿಂದ ಆರಂಭವಾಗಿ 0.00 ಕಿ.ಮೀ ನಿಂದ 114.142 ಕಿ.ಮೀ ವರೆಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಅಜ್ಜಂಪುರ, ಕಡೂರು ತಾಲೂಕುಗಳು,
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಹಾಗೂ ಚಳ್ಳಕೆರೆ ತಾಲೂಕುಗಳ ಮೂಲಕ ಗೋನೂರು ಕೆರೆಯವರೆಗೆ ನೀರು ತಲುಪಲಿದೆ.
ಸಾರ್ವಜನಿಕರಿಗೆ ಸುರಕ್ಷತಾ ಸೂಚನೆಗಳು:
ಕಾಲುವೆ ಮತ್ತು ಹಳ್ಳಗಳ ದಂಡೆಯಲ್ಲಿ ಸಾರ್ವಜನಿಕರು ಸಂಚರಿಸುವುದು, ಈಜುವುದು ಹಾಗೂ ಜಾನುವಾರುಗಳನ್ನು ಕಾಲುವೆಗೆ ಇಳಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕಾಲುವೆ ಕಟ್ಟೆಗಳನ್ನು ಹಾನಿಗೊಳಿಸುವುದು ಹಾಗೂ ಅನಧಿಕೃತವಾಗಿ ಪಂಪ್‌ಸೆಟ್‌ಗಳನ್ನು ಅಳವಡಿಸಿ ನೀರು ಎತ್ತುವುದು ಕಾನೂನುಬಾಹಿರವಾಗಿದೆ.
ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ನೀರಾವರಿ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಸೂಪರಿಂಟೆಂಡಿಂಗ್ ಇಂಜಿನಿಯರ್ ತಿಳಿಸಿದ್ದಾರೆ.
ಹುಲಿ-ಸಿಂಹಧಾಮದಲ್ಲಿ 17 ವರ್ಷದ ಹೆಣ್ಣುಹುಲಿ ದಶಮಿ ಸಾವು
ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ 17 ವರ್ಷದ ಹೆಣ್ಣು ಹುಲಿ ದಶಮಿ ಸೆ. 6 ರಂದು ಬೆಳಿಗ್ಗೆ 11.25 ಕ್ಕೆ ವಯೋಸಹಜವಾದ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿರುವುದಾಗಿ ಮೃಗಾಲಯದ ಪಶುವೈದರು ದೃಢಪಡಿಸಿದ್ದಾರೆ.
ಈ ಬಗ್ಗೆ ಕಾನೂನು ರೀತ್ಯಾ ಮರಣೋತ್ತರ ಪರೀಕ್ಷೆಯನ್ನು ಪಶುವೈದ್ಯರ ತಂಡದಿಂದ ನಡೆಸಲಾಗುವುದು ಎಂದು ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸೆಪ್ಟೆಂಬರ್ 21 ರಂದು ಡಾಕ್ ಅದಾಲತ್
ಶಿವಮೊಗ್ಗ: ಶಿವಮೊಗ್ಗ ಅಂಚೆ ವಿಭಾಗದ ತ್ರೈಮಾಸಿಕ ‘ಡಾಕ್ ಅದಾಲತ್’ ಕಾರ್ಯಕ್ರಮವನ್ನು ದಿನಾಂಕ 21.09.2026 ರ ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಅಂಚೆ ಅಧೀಕ್ಷಕರ ಕಚೇರಿ, ಶಿವಮೊಗ್ಗ ಅಂಚೆ ವಿಭಾಗ, ಜೈಲು ರಸ್ತೆ, ಶಿವಮೊಗ್ಗ-577201 ಇಲ್ಲಿ ಆಯೋಜಿಸಲಾಗಿದೆ.
ಅಂಚೆ ಇಲಾಖೆಯ ಸೇವೆಗಳ ಕುರಿತು ಯಾವುದೇ ಕುಂದುಕೊರತೆಗಳು ಅಥವಾ ಸಲಹೆಗಳನ್ನು ಹೊಂದಿರುವ ಸಾರ್ವಜನಿಕರು ತಮ್ಮ ಅರ್ಜಿಗಳನ್ನು ಸಂಪೂರ್ಣ ವಿವರಗಳೊಂದಿಗೆ ಮೇಲ್ಕಂಡ ವಿಳಾಸಕ್ಕೆ ದಿನಾಂಕ 18.09.2026 ರೊಳಗಾಗಿ ತಲುಪುವಂತೆ ಕಳುಹಿಸಿಕೊಡಬಹುದು. ಸ್ವೀಕರಿಸಲಾದ ಕುಂದುಕೊರತೆಗಳು ಹಾಗೂ ಸಲಹೆಗಳನ್ನು ಡಾಕ್ ಅದಾಲತ್‌ನಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ತಮ್ಮ ಸ್ವಂತ ವೆಚ್ಚದಲ್ಲಿ ಡಾಕ್ ಅದಾಲತ್‌ನಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳು ಹಾಗೂ ಸಲಹೆಗಳ ಕುರಿತು ಚರ್ಚಿಸಬಹುದಾಗಿದೆ ಎಂದು ಶಿವಮೊಗ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಎಂ. ಕುಮಾರಸ್ವಾಮಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹ್ಯಾದ್ರಿ ಕಲಾ ಕಾಲೇಜಿನ ಕಲಾ ಪರಿಷತ್ ಪದಾಧಿಕಾರಿಗಳ ಆಯ್ಕೆ
ಶಿವಮೊಗ್ಗ: ಸಹ್ಯಾದ್ರಿ ಕಲಾ ಕಾಲೇಜಿನ 2026-27ನೇ ಸಾಲಿನ ಸಹ್ಯಾದ್ರಿ ಕಲಾ ಪರಿಷತ್ತಿನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಗಿದೆ.
ಪ್ರಾಂಶುಪಾಲರು ಅಧ್ಯಕ್ಷರಾಗಿರುವ ಈ ಕಲಾ ಪರಿಷತ್ ನ ಉಪಾಧ್ಯಕ್ಷರಾಗಿ ರವಿಚಂದ್ರ ಡಿ, ಕಾರ್ಯದರ್ಶಿಯಾಗಿ ತನುಶ್ರೀ ಹಾಗೂ ಸಹ ಕಾರ್ಯದರ್ಶಿಗಳಾಗಿ ಹನುಮಂತ ಟಿ. ಮತ್ತು ಪ್ರೀತಿ ಎಸ್ ಅವರು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್. ಸಿರಾಜ್ ಅಹಮದ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್. ಮಂಜುನಾಥ್ ಹಾಗೂ ಬೋಧಕ ಮತ್ತು ಬೋಧಕೇತರ ವರ್ಗದವರು ಶುಭಾಶಯ ಕೋರಿದ್ದಾರೆ.

