ಬೆಂಗಳೂರು: ಕಬ್ಬಡಿ ಪಂದ್ಯಾವಳಿಯ ವೇಳೆ ಕಾನೂನುಬಾಹಿರ ಬೆಟ್ಟಿಂಗ್ ನಲ್ಲಿ ತೊಡಗಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಆರೋಪಿಯಾಗಿರುವ ಬೆಟ್ಟಿಂಗ್ ಪ್ರಕರಣ ಸಂಬಂಧದ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶಿಸಿದ್ದ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯದ ಆದೇಶ ಪ್ರಶ್ನಿಸಿ ಶುಭಾ ಕಲ್ಯಾಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರ ಪೀಠ ಈ ಆದೇಶ ನೀಡಿದೆ.
ಜೊತೆಗೆ ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಲಾಗಿದೆ. ಎಸಿಜೆಎಂ ನ್ಯಾಯಾಲಯದ ಆದೇಶ ರದ್ದು ಕೋರಿ ಸಚಿವ ಪರಮೇಶ್ವರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 23 ರಂದು ವಿಚಾರಣೆ ನಡೆಸಿದ ಹೈಕೋರ್ಟ್ ತಡೆ ನೀಡಿತ್ತು. ತುಮಕೂರಿನಲ್ಲಿ ನಡೆದಿದ್ದ ಕಬಡ್ಡಿ ಪಂದ್ಯಾವಳಿಯ ವೇಳೆ ಜಿಲ್ಲಾಧಿಕಾರಿಯೊಂದಿಗೆ 500 ರೂಪಾಯಿ ಬೆಟ್ಟಿಂಗ್ ಕಟ್ಟಿರುವುದಾಗಿ ಪರಮೇಶ್ವರ್ ಹೇಳಿಕೆ ನೀಡಿದ್ದರು.

