ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ ಗೃಹಜ್ಯೋತಿ ಫಲಾನುಭವಿಗಳ ಮರು ಸಮೀಕ್ಷೆಗೆ ಅಕ್ಟೋಬರ್ 31ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಫಲಾನುಭವಿಗಳ ಮರು ಸಮೀಕ್ಷೆ ಸಂದರ್ಭದಲ್ಲಿ ಮನೆಗೆ ಬೀಗ ಹಾಕಿದ, ಖಾಲಿ ಇರುವ ಮನೆಗಳು ಹಾಗೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಗ್ರಾಹಕರು ಅಕ್ಟೋಬರ್ 31ರೊಳಗೆ ಸಮೀಪದ ಬೆಸ್ಕಾಂ ಕಚೇರಿಗೆ ಖುದ್ದಾಗಿ ತೆರಳಿ ದಾಖಲೆ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.
ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿನ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಯ ಗ್ರಾಹಕರು ಸೇರಿದಂತೆ 74.29 ಲಕ್ಷ ಗ್ರಾಹಕರು ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಇವುಗಳ ಪೈಕಿ 72.40 ಲಕ್ಷ ಗ್ರಾಹಕರ ಸಮೀಕ್ಷೆ ಅಕ್ಟೋಬರ್ 14ಕ್ಕೆ ಪೂರ್ಣಗೊಂಡಿದೆ. ಸಮೀಕ್ಷೆ ವೇಳೆ ಲಭ್ಯವಿಲ್ಲದ ಸುಮಾರು 16.37 ಲಕ್ಷ ಗ್ರಾಹಕರಿದ್ದಾರೆ. ಈ ಗ್ರಾಹಕರಿಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅಂತಿಮ ಅವಕಾಶ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಬೆಸ್ಕಾಂ ಮನವಿ ಮಾಡಿದ್ದು, ನಂತರ ಗೃಹಜ್ಯೋತಿ ಫಲಾನುಭವಿಗಳ ಮರು ಸಮೀಕ್ಷೆ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿತ್ತು.
ಸಮೀಕ್ಷೆಯ ವೇಳೆ 16.09 ಲಕ್ಷ ಫಲಾನುಭವಿಗಳ ಮನೆಗಳಿಗೆ ಬೀಗ ಹಾಕಿರುವುದು, 28,519 ಮನೆಗಳು ಖಾಲಿ ಇರುವುದನ್ನು ಗುರುತಿಸಲಾಗಿದೆ. ಈ ಗ್ರಾಹಕರು ಅಕ್ಟೋಬರ್ 31ರೊಳಗೆ ಖುದ್ದಾಗಿ ಬೆಸ್ಕಾಂ ಉಪ ವಿಭಾಗ ಕಚೇರಿಗೆ ತೆರಳಿ ದಾಖಲೆ ಸಲ್ಲಿಸಬೇಕು. ದಾಖಲೆ ಪರಿಶೀಲನೆಗೆ ಇದು ಕೊನೆಯ ಅವಕಾಶವಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಕರ್ತವ್ಯಕ್ಕೆ ಅನಧಿಕೃತ ಗೈರು; ಶಿಕ್ಷಕಿಗೆ ಅಂತಿಮ ನೋಟಿಸ್, ಸೇವೆಯಿಂದ ವಜಾಗೊಳಿಸುವ ಎಚ್ಚರಿಕೆ
ಬಳ್ಳಾರಿ: ಮೇಲಧಿಕಾರಿಗಳ ಅನುಮತಿಯಿಲ್ಲದೆ ಮತ್ತು ಶಾಲೆಗೆ ಯಾವುದೇ ಮಾಹಿತಿ ನೀಡದೆ ದೀರ್ಘಕಾಲದಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗಿರುವ ಶಿಕ್ಷಕಿಯೊಬ್ಬರಿಗೆ ಬಳ್ಳಾರಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ.
ಸಂಡೂರು ತಾಲೂಕಿನ ಯು ರಾಜಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಿ.ಪಿ.ಟಿ. ಶಿಕ್ಷಕಿ ಶಿಲ್ಪ.ಕೆ ಅವರು 23/06/2021 ರಿಂದ ಕರ್ತವ್ಯಕ್ಕೆ ಹಾಜರಾಗದೆ ಅನಧಿಕೃತವಾಗಿ ಗೈರುಹಾಜರಾಗಿದ್ದಾರೆ. 18/12/2021, 07/08/2023 ಹಾಗೂ 23/09/2024 ರಂದು ಅವರಿಗೆ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಿದ್ದರೂ, ಅವರು ಇಲ್ಲಿಯವರೆಗೂ ಕರ್ತವ್ಯಕ್ಕೆ ಹಾಜರಾಗಿಲ್ಲ.
ನೋಟಿಸ್ ಹಾಗೂ ಪ್ರಕಟಣೆಗಳ ಮೂಲಕ ಕರ್ತವ್ಯಕ್ಕೆ ಮರಳಲು ಸಾಕಷ್ಟು ಅವಕಾಶ ನೀಡಲಾಗಿದ್ದರೂ ಶಿಕ್ಷಕಿ ಗೈರುಹಾಜರಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ಈ ಅಂತಿಮ ಪ್ರಕಟಣೆ ಹೊರಡಿಸಲಾಗಿದೆ. ಪ್ರಕಟಣೆ ಪ್ರಕಟವಾದ 7 ದಿನಗಳ ಒಳಗಾಗಿ ಬಳ್ಳಾರಿಯ ಶಾಲಾ ಶಿಕ್ಷಣ ಇಲಾಖೆಯ ಶಿಸ್ತುಪ್ರಾಧಿಕಾರಿ ಹಾಗೂ ಉಪನಿರ್ದೇಶಕರ (ಆಡಳಿತ) ಕಚೇರಿಗೆ ಖುದ್ದಾಗಿ ಹಾಜರಾಗಿ ರಕ್ಷಣಾ ಹೇಳಿಕೆಯನ್ನು ಸಲ್ಲಿಸಬೇಕು. ತಪ್ಪಿದಲ್ಲಿ, ಅವರ ಹೇಳಿಕೆಯೇನೂ ಇಲ್ಲವೆಂದು ಭಾವಿಸಿ ಏಕಪಕ್ಷೀಯವಾಗಿ ಸರ್ಕಾರದ ಆದೇಶ ಹಾಗೂ ಸಿ.ಸಿ.ಎ 1957ರ ನಿಯಮಗಳ ಭಾಗ-4, ನಿಯಮ 8ರ ಉಪನಿಯಮ (8) ರನ್ವಯ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಶಿಸ್ತುಪ್ರಾಧಿಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

