ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಳೆಯಿಂದ ಘನತ್ಯಾಜ್ಯ ನಿರ್ವಹಣೆಯಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ. ನಿಯಮ ಉಲ್ಲಂಘಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ದೇಶಾದ್ಯಂತ ಏಕರೂಪ ಘನತ್ಯಾಜ್ಯ ನಿರ್ವಹಣೆ ನಿಯಮ ಜಾರಿಗಾಲಿದ್ದು, ನಾಳೆಯಿಂದಲೇ ಬೆಂಗಳೂರಿನಲ್ಲಿ ಈ ನಿಟ್ಟಿನಲ್ಲಿ ಹೊಸ ನಿಯಮ ಅನ್ವಯವಾಗಲಿದೆ. ಸಮರ್ಪಕವಾಗಿ ಕಸ ವಿಂಗಡಣೆ ಮಾಡದಿದ್ದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಜಿಬಿಎ ದಂಡಾಸ್ತ್ರ ಪ್ರಯೋಗ ಮಾಡಲಿದೆ.
ಸರಿಯಾಗಿ ಕಸ ವಿಂಗಡಿಸದೇ ಇದ್ದಲ್ಲಿ ಮೊದಲ ಬಾರಿ 500 ರೂಪಾಯಿ ದಂಡ ವಿಧಿಸಲಾಗುವುದು. ಎರಡನೇ ಬಾರಿಯೂ ನಿಯಮ ಉಲ್ಲಂಘನೆ ಮಾಡಿದರೆ 1000 ರೂಪಾಯಿ ದಂಡ ವಿಧಿಸಲಾಗುವುದು. ನಾಲ್ಕು ಮಾದರಿಯಲ್ಲಿ ಕಸ ವಿಂಗಡಣೆ ಮಾಡಿ ಆಟೋಗಳಿಗೆ ಕೊಡಬೇಕು ಎಂದು ಸೂಚಿಸಲಾಗಿದೆ.
ಹಸಿಕಸ, ಒಣಕಸ, ಸ್ಥಳೀಯ ನೈರ್ಮಲ್ಯ ಕಸ ಹಾಗೂ ವಿಶೇಷ ತ್ಯಾಜ್ಯ ಕಸ ಹೀಗೆ ನಾಲ್ಕು ಹಂತದಲ್ಲಿ ಕಸಗಳನ್ನು ವಿಂಗಡಿಸಿ ಕೊಡಬೇಕು. ನಿಯಮ ಉಲ್ಲಂಘನೆ ಮಾಡಿದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

