ಬೆಂಗಳೂರು: ಪೋಷಕರು ಬೆಚ್ಚಿ ಬೀಳುವಂತಹ ಮಾಹಿತಿಯೊಂದು ಬಯಲಾಗಿದೆ. ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ 14,878 ಮಕ್ಕಳು ಕಿಡ್ನ್ಯಾಪ್ ಆಗಿದ್ದಾರೆ. ಈ ಬಗ್ಗೆ ಸರ್ಕಾರಿ ದಾಖಲೆಗಳ ಅಂಕಿ-ಅಂಶ ಬಯಲಾಗಿದೆ.
2020-2025ರ ಜುಲೈ ವರೆಗೆ 14,878 ಮಕ್ಕಳ ಅಪಹರಣವಾಗಿದೆ. ಹೀಗೆ ಕಿಡ್ನ್ಯಾಪ್ ಆದ ಕೆಲ ಮಕ್ಕಳು ಏನಾದರು ಎಲ್ಲಿಗೆ ಹೋದರು ಎಂಬ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂಬುದು ಮತ್ತಷ್ಟು ಆತಂಕಕಾರಿ ಮಾಹಿತಿ.
10,792 ಅಪ್ರಾಪ್ತೆಯರು ಕಿಡ್ನ್ಯಾಪ್ ಆಗಿದ್ದು, 4,086 ಬಾಲಕರು ಕೂಡ ಅಪಹರಣಕ್ಕೀಡಾಗಿದ್ದಾರೆ. ಅಪಹರಣಕ್ಕೀಡಾದ 10,792 ಅಪ್ರಾಪ್ತೆಯರ ಪೈಕಿ 9789 ಮಕ್ಕಳು ಪತ್ತೆಯಾಗಿದ್ದಾರೆ. ಆದರೆ ಉಳಿದ ಮಕ್ಕಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಒಟ್ಟು ಕಿಡ್ನ್ಯಾಪ್ ಆದ 14,878 ಮಕ್ಕಳ ಪೈಕಿ 13,542 ಮಕ್ಕಳು ಪತ್ತೆಯಾಗಿದ್ದಾರೆ. 1336 ಮಕ್ಕಳು ಇನ್ನೂ ಕಣ್ಮರೆಯಾಗಿದ್ದು, ಇವರ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಈ ಕುರಿತು ಸರ್ಕಾರಿ ದಾಖಲೆಯಲ್ಲಿ ಅಂಕಿ-ಅಂಶಗಳು ಬಹಿರಂಗವಾಗಿವೆ.
ಒಟ್ಟಾರೆ ರಾಜ್ಯದಲ್ಲಿ ಮಕ್ಕಳ ಅಪಹರಣ ಪ್ರಕರಣ ಆತಂಕಕಾರಿ ಬೆಳವಣಿಗೆಯಾಗಿದ್ದು, ಪೋಷಕರನ್ನು ಬೆಚ್ಚಿ ಬೀಳಿಸಿದೆ. ನಾಪತ್ತೆಯಾಗಿರುವ ಮಕ್ಕಳ ಬಗ್ಗೆ ತನಿಖೆ ಕೈಗೊಳ್ಳಬೇಕಾದ ಅಗತ್ಯವಿದೆ.

