ಬೆಂಗಳೂರು: ಒಂದು ವಾಹನಕ್ಕೆ ಮತ್ತೊಂದು ವಾಹನ ಟಚ್ ಆಗಿದ್ದಕ್ಕೆ ಚಾಲಕರಿಬ್ಬರು ರೊಚ್ಚಿಗೆದ್ದು ಸಿನಿಮೀಯ ರೀತಿಯಲ್ಲಿ ಸಂಘರ್ಷಕ್ಕಿಳಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.
ರಸ್ತೆ ಅಪಘಾತವೊಂದರ ಹಿನ್ನೆಲೆಯಲ್ಲಿ ಇನ್ನೋವಾ ಮತ್ತು ಸ್ವಿಫ್ಟ್ ಕಾರು ಚಾಲಕರ ನಡುವೆ ಸಿನಿಮಾ ಮಾದರಿಯ ಚೇಸಿಂಗ್ ಹಾಗೂ ಹೈಡ್ರಾಮಾ ನಡೆದಿದೆ. ಸ್ವಿಫ್ಟ್ ಹಾಗೂ ಇನ್ನೋವಾಕಾರುಗಳ ನಡುವೆ ಟಚ್ ಆಗಿದೆ. ಇದಕ್ಕೆ ಕೋಪಗೊಂಡು ಸ್ವಿಫ್ಟ್ ಕಾರಿಗೆ ಟಚ್ ಮಾಡಿದ ಇನ್ನೋವಾ ಚಾಲಕ, ಸ್ವಿಫ್ಟ್ ಚಾಲಕನ ಕಾರಿನ ಕೀ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಜಾಗೃತನಾದ ಸ್ವಿಫ್ಟ್ ಚಾಲಕ, ಬೈಕ್ ಸವಾರನ ನೆರವು ಪಡೆದು ಇನ್ನೋವಾ ಕಾರನ್ನು ಚೇಸ್ ಮಾಡಿ ಹಿಡಿದಿದ್ದಾರೆ.
ಈ ವೇಳೆ ಪೊಲೀಸ್ ಠಾಣೆಗೆ ಬರುವುದಾಗಿ ಹೇಳಿ ಇನ್ನೋವಾ ಚಾಲಕ ಮತ್ತೆ ರ್ಯಾಶ್ ಡ್ರೈವಿಂಗ್ ಮಾಡುತ್ತಾ ಎಸ್ಕೇಪ್ ಆಗಲು ಯತ್ನಿಸಿದಾಗ, ಮತ್ತೆ ಬೈಕ್ನಲ್ಲಿ ಬೆನ್ನಟ್ಟಿ ಕೊನೆಗೂ ಆತನನ್ನು ತಡೆಯಲಾಗಿದೆ. ಹುಳಿಮಾವು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಸಂಪೂರ್ಣ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

