ಗ್ಲ್ಯಾಸ್ಗೋ: ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026 ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ಮುಂದುವರಿಸಿದ್ದು, ನಾಲ್ಕನೇ ದಿನದ ಅಂತ್ಯಕ್ಕೆ ಒಟ್ಟು 4 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಭರ್ಜರಿ ಪ್ರದರ್ಶನದೊಂದಿಗೆ ಭಾರತವು ಪದಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ಮೀರಾಬಾಯಿ ಚಾನು ಗೋಲ್ಡನ್ ಹ್ಯಾಟ್ರಿಕ್:
ಭಾರತದ ಸ್ಟಾರ್ ವೇಟ್‌ಲಿಫ್ಟರ್ ಹಾಗೂ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಮಹಿಳೆಯರ 48ಕೆಜಿ ವಿಭಾಗದಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ ಭಾರತಕ್ಕೆ ಕೂಟದ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಸ್ನ್ಯಾಚ್‌ನಲ್ಲಿ ಗೇಮ್ಸ್ ದಾಖಲೆಯ 85ಕೆಜಿ ಹಾಗೂ ಒಟ್ಟು 190ಕೆಜಿ ಭಾರ ಎತ್ತುವ ಮೂಲಕ ಚಾನು, ಕಾಮನ್‌ವೆಲ್ತ್ ಕೂಟದಲ್ಲಿ ಸತತ 3ನೇ ಬಾರಿ ಚಿನ್ನ ಗೆದ್ದು ಗೋಲ್ಡನ್ ಹ್ಯಾಟ್ರಿಕ್ ಐತಿಹಾಸಿಕ ಸಾಧನೆಗೆ ಪಾತ್ರರಾಗಿದ್ದಾರೆ.
2018ರ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (48 ಕೆಜಿ ವಿಭಾಗ) ಮೊದಲ ಬಾರಿಗೆ ಚಿನ್ನ ಗೆದ್ದಿದ್ದ ಮೀರಾಬಾಯಿ, ಬಳಿಕ 2022 ರ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕೂಟದಲ್ಲೂ (49 ಕೆಜಿ ವಿಭಾಗ) ಬಂಗಾರಕ್ಕೆ ಕೊರಳೊಡ್ಡಿದ್ದರು. ಇದೀಗ 2026 ಗ್ಲ್ಯಾಸ್ಗೋ ಕೂಟದಲ್ಲೂ ಚಿನ್ನದ ಪದಕ ಜಯಿಸಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.
ವೇಟ್‌ಲಿಫ್ಟಿಂಗ್‌ನಲ್ಲಿ ಎರಡೆರಡು ಬೆಳ್ಳಿ ಪದಕ:
ಪುರುಷರ ವೇಟ್‌ಲಿಫ್ಟಿಂಗ್‌ನಲ್ಲೂ ಭಾರತಕ್ಕೆ ಯಶಸ್ಸು ಸಿಕ್ಕಿದ್ದು, ಒಂದೇ ದಿನ ಎರಡು ಬೆಳ್ಳಿ ಪದಕಗಳು ಲಭಿಸಿವೆ.
ಪುರುಷರ 60ಕೆಜಿ ವಿಭಾಗದಲ್ಲಿ ಒಟ್ಟು 264 ಕೆಜಿ ಭಾರ ಎತ್ತುವ ಮೂಲಕ ಚೊಚ್ಚಲ ಕಾಮನ್‌ವೆಲ್ತ್ ಕೂಟದಲ್ಲೇ ರಿಷಿಕಾಂತ ಸಿಂಗ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ವಿಶೇಷವೆಂದರೆ, ಸ್ನ್ಯಾಚ್ ವಿಭಾಗದಲ್ಲಿ 121 ಕೆಜಿ ಎತ್ತುವ ಮೂಲಕ ರಿಷಿಕಾಂತ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಇನ್ನು ಪುರುಷರ 65 ಕೆಜಿ ವಿಭಾಗದಲ್ಲಿ ಒಟ್ಟು 286 ಕೆಜಿ ತೂಕ ಎತ್ತಿದ ಮುತ್ತುಪಾಂಡಿ ರಾಜಾ ದ್ವಿತೀಯ ಸ್ಥಾನ ಗಳಿಸಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.
ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲೂ ಪದಕ:
ಇದಕ್ಕೂ ಮುನ್ನ ಭಾರತದ ಪ್ಯಾರಾ ಅಥ್ಲೀಟ್ ಝಂಡು ಕುಮಾರ್ ಅವರು ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ 190ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದು ಭಾರತದ ಪದಕದ ಖಾತೆಯನ್ನು ತೆರೆದಿದ್ದರು. ಪ್ರಸ್ತುತ ಭಾರತವು 1ಚಿನ್ನ, 2ಬೆಳ್ಳಿ ಹಾಗೂ 1ಕಂಚಿನ ಪದಕ ಸೇರಿದಂತೆ ಒಟ್ಟು 4ಪದಕಗಳೊಂದಿಗೆ ಶುಭಾರಂಭ ಮಾಡಿದೆ.

