HomeLatest Newsಬೆಂಗಳೂರು-ವಿಜಯಪುರ ವಯಾ ಗದಗ ಬೈಪಾಸ್ ವಿಶೇಷ ರೈಲು

ಬೆಂಗಳೂರು-ವಿಜಯಪುರ ವಯಾ ಗದಗ ಬೈಪಾಸ್ ವಿಶೇಷ ರೈಲು

ಬೆಂಗಳೂರು-ವಿಜಯಪುರ ನಡುವೆ ಕ್ರಿಸ್‌ಮಸ್ ಮತ್ತು ವರ್ಷಾಂತ್ಯದ ರಜೆ ಹಿನ್ನಲೆಯಲ್ಲಿ ವಿಶೇಷ ರೈಲು ಘೋಷಣೆ ಮಾಡಲಾಗಿದೆ. ಈ ರೈಲು ವಯಾ ಗದಗ ಬೈಪಾಸ್ ಮೂಲಕ ಸಂಚಾರವನ್ನು ನಡೆಸಲಿದ್ದು, ಬೆಂಗಳೂರು-ವಿಜಪುರ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗಲಿದೆ.

ಬೆಂಗಳೂರು-ವಿಜಯಪುರ ರೈಲು ಸಂಚಾರಕ್ಕೆ ಹೊಸ ದಿಕ್ಕು ಎಂದು ಸಚಿವ ಎಂ.ಬಿ.ಪಾಟೀಲ್ ಬಣ್ಣಿಸಿದ್ದಾರೆ.
ಕ್ರಿಸ್‌ಮಸ್ ಮತ್ತು ವರ್ಷಾಂತ್ಯದ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ನೈರುತ್ಯ ರೈಲ್ವೆಯು ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕ ವಿಜಯಪುರಕ್ಕೆ ವಿಶೇಷ ರೈಲನ್ನು ಓಡಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಬೆಂಗಳೂರು–ವಿಜಯಪುರ ರೈಲುಗಳನ್ನು ಹುಬ್ಬಳ್ಳಿ–ಗದಗ ಬೈಪಾಸ್ ಮೂಲಕ ಓಡಿಸಲು ನಡೆದ ನಮ್ಮ ಪ್ರಯತ್ನಕ್ಕೆ ಮೊದಲ ಯಶಸ್ಸು ದೊರೆತಿದೆ. ಈ ಹೊಸ ಮಾರ್ಗದ ಮೂಲಕ ಒಂದು ವಿಶೇಷ ರೈಲು ಯಶಸ್ವಿಯಾಗಿ ಓಡಿದೆ, ಇದರಿಂದ ಎಂಜಿನ್ ಬದಲಾವಣೆ ತಪ್ಪಿದ್ದು ಸಮಯ ಉಳಿತಾಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಗಲಕೋಟೆ–ವಿಜಯಪುರದ ಎಲ್ಲ ರೈಲುಗಳನ್ನು ಈ ಬೈಪಾಸ್ ಮೂಲಕ ಓಡಿಸಿದರೆ, ಪ್ರಯಾಣದ ಸಮಯವನ್ನು 14 ರಿಂದ 10 ಗಂಟೆಗಳಿಗೆ ಇಳಿಸಬಹುದು. ಜೊತೆಗೆ ಪ್ರಯಾಣ ದರವೂ ಕಡಿಮೆಯಾಗಲಿದೆ. ಇದನ್ನು ಸಾಧಿಸಲು ಮೈಸೂರು–ಪಂಡರಪುರ ಎಕ್ಸ್‌ಪ್ರೆಸ್ ಅನ್ನು ಶಾಶ್ವತವಾಗಿ ಈ ಬೈಪಾಸ್ ಮೂಲಕ ಓಡಿಸಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.

ಇದಲ್ಲದೆ, ವಿಜಯಪುರಕ್ಕೆ ಒಂದು ಪ್ರತ್ಯೇಕ ವಿಶೇಷ ರೈಲನ್ನು ಕಾಯಂ ಆಗಿ ಓಡಿಸಬೇಕು. ಕೇಂದ್ರ ರೈಲ್ವೆ ಸಚಿವರಿಗೆ ಈ ಬೇಡಿಕೆಯನ್ನು ಮುಂದಿರಿಸಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಪ್ರಯಾಣದ ಅವಧಿ ಕಡಿತಕ್ಕೆ ಪ್ರಯತ್ನ: ಬೆಂಗಳೂರು-ವಿಜಯಪುರ ನಡುವಿನ ರೈಲು ಸಂಚಾರದ ಅವಧಿ ಕಡಿತಗೊಳಿಸಬೇಕು ಮತ್ತು ಉಭಯ ನಗರದ ನಡುವೆ ವಂದೇ ಭಾರತ್ ರೈಲು ಸಂಚಾರವನ್ನು ಆರಂಭಿಸಬೇಕು ಎಂದು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಖಾತೆ ಸಚಿವ ಎಂ.ಬಿ.ಪಾಟೀಲ್ ಪ್ರಯತ್ನ ನಡೆಸುತ್ತಿದ್ದಾರೆ.

ಬೆಂಗಳೂರು-ವಿಜಯಪುರ ರೈಲು ಪ್ರಯಾಣದ ಅವಧಿ ಪ್ರಸ್ತುತ 11 ರಿಂದ 15 ಗಂಟೆಗಳು ತೆಗೆದುಕೊಳ್ಳುತ್ತದೆ. ಆದರೆ ಸಚಿವರು ಇದನ್ನು 10 ಗಂಟೆಗಳಿಗಿಂತ ಕಡಿಮೆಗೊಳಿಸುವ ಗುರಿಯನ್ನು ಹೊಂದಿದ್ದಾರೆ. ಹೊಸ ಮಾರ್ಗ, ಬೈಪಾಸ್, ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡರೆ ಅವಧಿ ಕಡಿತವಾಗಲಿದೆ.

ಕೆಲವು ದಿನಗಳ ಹಿಂದೆ ಮಾತನಾಡಿದ್ದ ಸಚಿವ ಎಂ.ಬಿ.ಪಾಟೀಲ್ ಬೆಂಗಳೂರು-ವಿಜಯಪುರ ರೈಲು ಪ್ರಯಾಣದ ಅವಧಿ ಸುಮಾರು 4 ಗಂಟೆಯಷ್ಟು ಕಡಿತಗೊಳಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ ಎಂದು ಹೇಳಿದ್ದರು. ಬೆಂಗಳೂರು-ವಿಯಪುರ-ಬಾಗಲಕೋಟೆ ನಡುವಿನ 660 ಕಿ.ಮೀ. ಪ್ರಯಾಣಕ್ಕೆ 14 ಗಂಟೆ ಆಗುತ್ತಿದೆ.

ಸಮಯ ವ್ಯರ್ಥವಾಗುವುದನ್ನು ತಪ್ಪಿಸಿ 10 ಗಂಟೆಗಳಲ್ಲಿ ರೈಲು ಸಂಚಾರ ನಡೆಸುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದರು. ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡರೆ ವಂದೇ ಭಾರತ್ ರೈಲುಗಳ ಸಂಚಾರವನ್ನು ಆರಂಭಿಸಲಾಗುತ್ತದೆ ಎಂದು ಸಹ ಸಚಿವರು ಹೇಳಿದ್ದರು.

ಆಗ ಸಚಿವರು ಬೆಂಗಳೂರು-ವಿಜಯಪುರ ರೈಲನ್ನು ಹುಬ್ಬಳ್ಳಿ-ಗದಗ ಬೈಪಾಸ್ ಮಾರ್ಗದಲ್ಲಿ ಓಡಿಸಲು ತೊಂದರೆ ಇಲ್ಲ. ಸದ್ಯ ಓಡುತ್ತಿರುವ ರೈಲುಗಳ ಮಾರ್ಗ ಬದಲಾವಣೆ ಸಾಧ್ಯವಿಲ್ಲ. ಇದಕ್ಕೆ ರೈಲ್ವೆ ಇಲಾಖೆಯಿಂದ ಹೊಸ ರೈಲು ಮಂಜೂರು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದರು.

ಬೆಂಗಳೂರು-ವಿಜಯಪುರ ನಡುವೆ ವಂದೇ ಭಾರತ್ ರೈಲು ಓಡಿಸುವ ಬೇಡಿಕೆ ಇದೆ. ಆದರೆ ಅದು ಸಾಧುವಲ್ಲ. ವಂದೇ ಭಾರತ್ ಬದಲು ವಂದೇ ಭಾರತ್ ಸ್ಲೀಪರ್ ರೈಲನ್ನು ಈ ಮಾರ್ಗದಲ್ಲಿ ಓಡಿಸಬೇಕಿದೆ. ಈ ಕುರಿತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆಯಲಾಗುತ್ತದೆ ಎಂದು ಸಚಿವರು ಹೇಳಿದ್ದರು.

ಈಗ ಬೆಂಗಳೂರು-ವಿಜಯಪುರ ನಡುವೆ ಕ್ರಿಸ್‌ಮಸ್ ಮತ್ತು ವರ್ಷಾಂತ್ಯದ ರಜೆ ಹಿನ್ನಲೆಯಲ್ಲಿ ವಿಶೇಷ ರೈಲುನ್ನು ಓಡಿಸಲಾಗುತ್ತಿದೆ. ಈ ರೈಲು ವಯಾ ಗದಗ ಬೈಪಾಸ್ ಮೂಲಕ ಸಂಚಾರವನ್ನು ನಡೆಸಲಿದೆ. ಈ ಮಾರ್ಗದಲ್ಲಿ ಕಾಯಂ ರೈಲು ಸಂಚಾರ ಆರಂಭಿಸಲಾಗುತ್ತದೆಯೇ? ಎಂದು ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular