HomeKarnatakaಬೆಂಗಳೂರು ಜನರೇ ನೋಡಿ: 94 ಕೋಟಿಯಲ್ಲಿ 11 ರಸ್ತೆಗಳು ವೈಟ್ ಟಾಪಿಂಗ್

ಬೆಂಗಳೂರು ಜನರೇ ನೋಡಿ: 94 ಕೋಟಿಯಲ್ಲಿ 11 ರಸ್ತೆಗಳು ವೈಟ್ ಟಾಪಿಂಗ್

ಬೆಂಗಳೂರು ನಗರದಲ್ಲಿ ರಸ್ತೆಗಳನ್ನು ವೈಟ್‌ ಟಾಪಿಂಗ್ ಮಾಡಲಾಗುತ್ತದೆ. ಈ ಕಾಮಗಾರಿಗಳು ಬೇಗ ಮುಗಿಯುವುದಿಲ್ಲ. ಆದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ಜನರು ಪರದಾಡಬೇಕಾಗುತ್ತದೆ. ಈಗ ನಗರದ 11 ರಸ್ತೆಗಳ ವೈಟ್‌ ಟಾಪಿಂಗ್‌ಗೆ ಯೋಜನೆ ರೂಪಿಸಲಾಗಿದ್ದು ಇದರ ವೆಚ್ಚ ಸುಮಾರು 94 ಕೋಟಿ ರೂ.ಗಳು.

ಬೆಂಗಳೂರು ದಕ್ಷಿಣ ಭಾಗದ 11 ರಸ್ತೆಗಳ ವೈಟ್ ಟಾಪಿಂಗ್‌ಗೆ ಟೆಂಡರ್ ಕರೆಯಲಾಗಿತ್ತು. 2024ರ ಡಿಸೆಂಬರ್ 24ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ಅದನ್ನು ತೆರೆಯಲಾಗುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಈ ಕಾಮಗಾರಿ ನಡೆಯಲಿದೆ.

ಬಿಟಿಎಂ ಲೇಔಟ್, ಜಯನಗರ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಪ್ರಮುಖ 11 ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಯೋಜನೆ ರೂಪಿಸಲಾಗಿದೆ. ಒಟ್ಟು 94.62 ಕೋಟಿ ರೂ. ವೆಚ್ಚದಲ್ಲಿ ವೈಟ್‌ಟಾಪಿಂಗ್ ಮತ್ತು ಪಾದಚಾರಿ ಮಾರ್ಗವನ್ನು ಅಭಿವೃದ್ಧಿಗೊಳಿಸಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯದ ಮಾಹಿತಿ ಪ್ರಕಾರ ಟೆಂಡರ್ ಅಂತಿಮಗೊಳಿಸಿದ ನಂತರ 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಜಿಬಿಎಯ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ವೈಟ್ ಟಾಪಿಂಗ್ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿಗೆ ಟೆಂಡರ್ ಆಹ್ವಾನಿಸಿತ್ತು.

ಟೆಂಡರ್ ಪ್ರಕ್ರಿಯೆಯು ನಡೆಯುತ್ತಿದ್ದು ಕಳೆದ ವರ್ಷ ಡಿಸೆಂಬರ್ 24 ರಂದು ಬಿಡ್‌ಗಳನ್ನು ತೆರೆಯಲಾಗಿತ್ತು. ತಾಂತ್ರಿಕ ಬಿಡ್‌ಗಳನ್ನು ಜನವರಿ 3ರಂದು ತೆರೆಯಲಾಗಿದೆ. ತಾಂತ್ರಿಕ ಬಿಡ್‌ನಲ್ಲಿ ಅರ್ಹತೆ ಪಡೆಯುವವರಿಗೆ ಆರ್ಥಿಕ ಬಿಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.

ವೈಟ್ ಟಾಪಿಂಗ್‌ಗಾಗಿ ಯಾವ ಯಾವ ಪ್ರಮುಖ ರಸ್ತೆಗಳನ್ನು ಆಯ್ಕೆ ಮಾಡಲಾಗಿದೆ ಎಂಬ ಪಟ್ಟಿಯನ್ನು ಇನ್ನೂ ಪ್ರಕಟಿಸಲಾಗಿಲ್ಲ. ಮುಖ್ಯ ರಸ್ತೆಗಳ ವೈಟ್ ಟಾಪಿಂಗ್‌ ಮಾಡುವಾಗ ಪ್ರಮುಖ ಸವಾಲು ಸಂಚಾರಿ ವಿಭಾಗದಿಂದ ಪೊಲೀಸರಿಂದ ಮುಂಚಿತವಾಗಿ ಅನುಮತಿ ಪಡೆಯುವುದು.

ಪ್ರಮುಖ ರಸ್ತೆಗಳ ನವೀಕರಣ ಕಾರ್ಯವನ್ನು ಕೈಗೆತ್ತಿಕೊಂಡಾಗ, ಸಂಚಾರ ವಿಭಾಗದ ಅನುಮತಿ ಪಡೆಯುವುದು ಒಂದು ಕಠಿಣ ಕೆಲಸವಾಗಿದೆ. ಮೊದಲನೆಯದಾಗಿ ಸಂಚಾರ ವಿಭಾಗವು ಆ ರಸ್ತೆಯ ವಾಹನ ದಟ್ಟಣೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಮತ್ತು ಸಂಚಾರವನ್ನು ಹತ್ತಿರದ ಇತರ ರಸ್ತೆಗಳಿಗೆ ಬದಲಾವಣೆ ಮಾಡಲು ಯೋಜನೆ ರೂಪಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಮ್ಮೆ ಸಂಚಾರಿ ಪೊಲೀಸರ ಅನುಮತಿ ದೊರೆತ ನಂತರ ಬೆಂಗಳೂರು ಜಲಮಂಡಳಿಯ ನೀರು ಮತ್ತು ಒಳಚರಂಡಿ ಮಾರ್ಗಗಳು, ಬೆಸ್ಕಾಂ ಮತ್ತು ಇತರ ವ್ಯವಸ್ಥೆ ಸ್ಥಳಾಂತರಿಸುವುದು ಮತ್ತೊಂದು ಸವಾಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಮಾತನಾಡಿ, “ನಗರದಲ್ಲಿ ಸುದೀರ್ಘ ಕಾಲ ಬಾಳಿಕೆ ಬರುವ ಮತ್ತು ಗುಂಡಿ ಮುಕ್ತ ರಸ್ತೆಗಳನ್ನು ಒದಗಿಸಲು, ಮೂರು ವರ್ಷಗಳ ಅವಧಿಯಲ್ಲಿ ಅಂದಾಜು 1,700 ಕೋಟಿ ರೂಪಾಯಿ ವೆಚ್ಚದಲ್ಲಿ 500 ಕಿ.ಮೀ ಗೂ ಹೆಚ್ಚು ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲಾಗುವುದು,” ಎಂದು ಹೇಳಿದ್ದಾರೆ.  

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular