ಬೆಂಗಳೂರು: ಪಡಿತರ ಚೀಟಿ ಇ-ಕೆವೈಸಿ ಮಾಡಿಸಲು ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಪರದಾಟ ನಡೆಸಿದ್ದಾರೆ.
ಇ-ಕೆವೈಸಿ ಮಾಡಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದ್ದು, ಇದರಿಂದಾಗಿ ಇ-ಕೆವೈಸಿ ಮಾಡಿಸಲು ಸಾಧ್ಯವಾಗದ ಪಡಿತರ ಚೀಟಿದಾರರಿಗೆ ಆತಂಕ ಎದುರಾಗಿದೆ. ಬುಧವಾರ ಕೊಡಗು, ಕೊಪ್ಪಳ, ಯಾದಗಿರಿ, ಬಳ್ಳಾರಿ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಇ-ಕೆವೈಸಿ ಮಾಡಿಸಲು ಸಾರ್ವಜನಿಕರು ಪರದಾಟ ನಡೆಸಿದ್ದಾರೆ.
ಇ-ಕೆವೈಸಿ ಮಾಡಿಸದ ಪಡಿತರ ಚೀಟಿ ಸದಸ್ಯರ ಪಡಿತರ ನಿಲ್ಲಿಸಲಾಗುತ್ತದೆ ಎನ್ನಲಾಗಿದ್ದು, ಕೊಡಗು ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮುಂದೆ ಎರಡು ದಿನಗಳಿಂದ ಜನ ಕಾಯುವಂತಾಗಿದೆ. ಇ-ಕೆವೈಸಿ ಮಾಡಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿರುವುದರಿಂದ ಪಡಿತರ ಅಂಗಡಿಗಳ ಎದುರು ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಬಂದವರು ಇ-ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳು ಎದುರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ವರ್ ಸಮಸ್ಯೆಯಿಂದ ಕೆಲವೇ ಸಂಖ್ಯೆಯಲ್ಲಿ ಪಡಿತರ ಚೀಟಿಗಳಿಗೆ ಇ-ಕೆವೈಸಿ ಮಾಡಲಾಗುತ್ತಿದ್ದು, ಇದರಿಂದಾಗಿ ಹೆಚ್ಚಿನ ಗ್ರಾಹಕರಿಗೆ ತೊಂದರೆ ಆಗಿದೆ. ಸಮಸ್ಯೆ ಬಗೆಹರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಸೆಪ್ಟೆಂಬರ್ ಮಾಹೆಯಲ್ಲಿ ಪಡಿತರ ಚೀಟಿದಾರರು ಇ-ಕೆವೈಸಿ ಕಾರ್ಯ ಕಡ್ಡಾಯವಾಗಿ ಪೂರ್ಣಗೊಳಿಸಲು ಸೂಚನೆ
ಕೊಪ್ಪಳ: ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಸೆಪ್ಟೆಂಬರ್ ಮಾಹೆಯಲ್ಲಿ ತಮ್ಮ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 7,38,156 ಫಲಾನುಭವಿಗಳ ಪೈಕಿ ಇದುವರೆಗೆ ಕೇವಲ 3,720 ಫಲಾನುಭವಿಗಳ ಇ-ಕೆವೈಸಿ ಪೂರ್ಣಗೊಂಡಿದ್ದು, ಉಳಿದ 7,34,436 ಫಲಾನುಭವಿಗಳು ಇನ್ನೂ ಇ-ಕೆವೈಸಿ ಮಾಡಿಸಬೇಕಿದೆ. ಬಾಕಿ ಇರುವ ಫಲಾನುಭವಿಗಳ ಪಟ್ಟಿಯನ್ನು ಆಯಾ ತಾಲೂಕಿನ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ನೀಡಲಾಗಿದ್ದು, ಗ್ರಾಹಕರು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗೆ ಖುದ್ದಾಗಿ ಭೇಟಿ ನೀಡಿ, ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಇ-ಕೆವೈಸಿ ಪ್ರಕ್ರಿಯೆ ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ಶುಲ್ಕ ನೀಡುವಂತಿಲ್ಲ. ಸೆಪ್ಟೆಂಬರ್ 30 ಕೊನೆಯ ದಿನವಾಗಿರುತ್ತದೆ. ಪಡಿತರ ಚೀಟಿದಾರರು ನಿಗದಿತ ದಿನಾಂಕದೊಳಗೆ ತಪ್ಪದೇ ಇ-ಕೆವೈಸಿ ಮಾಡಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ಮುಂದುವರಿಸಿಕೊಳ್ಳಬೇಕಾಗಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದ್ದು, ಪರಿಶಿಷ್ಟ ವರ್ಗಗಳ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಪ್ರೋತ್ಸಾಹಿಸಿ, ಶ್ರಮಿಸಿ ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ವ್ಯಕ್ತಿಗಳು ತಮ್ಮ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜಂಟಿ ನಿರ್ದೇಶಕರ ಕಛೇರಿ , ಸಮಾಜ ಕಲ್ಯಾಣ ಇಲಾಖೆ, ನಂ.21/1, 1ನೇ ಮಹಡಿ, ಜೆಲ್ಲೇಟಾ ಟವರ್, ಮಿಷನ್ ರಸ್ತೆ, ಸಂಪಂಗಿರಾಮನಗರ, ಬೆಂಗಳೂರು ಇಲ್ಲಿ ಸೆಪ್ಟೆಂಬರ್ 30, 2026 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು .
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22240449. ಇ-ಮೇಲ್ [email protected] ಅನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

