ಉದ್ಯೋಗಕ್ಕಾಗಿ ಹೊಸ ನಗರಕ್ಕೆ ಸ್ಥಳಾಂತರಗೊಂಡಾಗ ತಕ್ಷಣವೇ ಸೂಕ್ತ ಮನೆ ಹುಡುಕುವುದು ಪ್ರತಿಯೊಬ್ಬರಿಗೂ ದೊಡ್ಡ ಸವಾಲು. ಈ ಸಮಸ್ಯೆಯನ್ನು ನೀಗಿಸಲು ಹಲವು ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಆರಂಭಿಕ ದಿನಗಳಲ್ಲಿ ಪಂಚತಾರಾ ಹೋಟೆಲ್‌ಗಳಲ್ಲಿ ಉಚಿತ ವಸತಿ ಸೌಲಭ್ಯ ಕಲ್ಪಿಸುತ್ತವೆ. ಅದೇ ರೀತಿ ಬೆಂಗಳೂರಿಗೆ ವರ್ಗಾವಣೆಯಾದ ದಂಪತಿಯೊಂದಕ್ಕೆ ಪತಿಯ ಆಫೀಸ್‌ನಿಂದ ನಗರದ ಅತ್ಯಂತ ದುಬಾರಿ ‘ದಿ ಲೀಲಾ ಪ್ಯಾಲೇಸ್’ ಹೋಟೆಲ್‌ನಲ್ಲಿ ಸತತ 21 ದಿನಗಳ ಕಾಲ ಉಚಿತವಾಗಿ ತಂಗುವ ಅವಕಾಶ ಸಿಕ್ಕಿದೆ.
ದಿ ಫಾರೆವರ್ ಜರ್ನಿ ಎಂಬ ಇನ್‌ಸ್ಟಾಗ್ರಾಮ್ ಖಾತೆ ನಡೆಸುತ್ತಿರುವ ಶಿವಾಂಗಿ ಮತ್ತು ಅವರ ಪತಿ ಮನುಜ್ ಈ ರೋಚಕ ಅನುಭವವನ್ನು ವೀಡಿಯೊ ಮೂಲಕ ಹಂಚಿಕೊಂಡಿದ್ದಾರೆ. ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದ ಇವರಿಗೆ ಕಂಪನಿಯು ಲೀಲಾ ಪ್ಯಾಲೇಸ್‌ನ ಐಷಾರಾಮಿ ಟವರ್ ಸೂಟ್ ನಲ್ಲಿ ವಸತಿ ವ್ಯವಸ್ಥೆ ಮಾಡಿತ್ತು. ಈ ಸೂಟ್‌ನಲ್ಲಿ ವಿಶಾಲವಾದ ಲಿವಿಂಗ್ ರೂಮ್, ಆಧುನಿಕ ಅಡುಗೆ ಮನೆ, ವಾಷಿಂಗ್ ಮೆಷಿನ್, ಮೈಕ್ರೋವೇವ್, ರೆಫ್ರಿಜರೇಟರ್ ಸೇರಿದಂತೆ ಮನೆಯ ವಾತಾವರಣವನ್ನು ನೀಡುವ ಎಲ್ಲಾ ಸೌಲಭ್ಯಗಳಿದ್ದವು.
ಇದರ ಜೊತೆಗೆ ಪ್ರತಿದಿನ ಹೈ-ಟೀ, ಉಪಾಹಾರದ ಬುಫೆ, ಕಾಕ್‌ಟೇಲ್ ಅವರ್ಸ್ ಹಾಗೂ ಅತ್ಯುತ್ತಮ ಹೌಸ್‌ಕೀಪಿಂಗ್ ಸೇವೆಗಳನ್ನು ದಂಪತಿ ಆನಂದಿಸಿದ್ದಾರೆ. ಲೀಲಾ ಪ್ಯಾಲೇಸ್ ವೆಬ್‌ಸೈಟ್ ಪ್ರಕಾರ, ಈ ಒಂದು ಟವರ್ ಸೂಟ್‌ನಲ್ಲಿ ಒಂದು ರಾತ್ರಿ ತಂಗಲು ತೆರಿಗೆ ಹೊರತುಪಡಿಸಿ ಕನಿಷ್ಠ 76,868 ರೂಪಾಯಿಯಿಂದ 92,850 ರೂಪಾಯಿವರೆಗೆ ವೆಚ್ಚವಾಗುತ್ತದೆ. ಈ ಲೆಕ್ಕಾಚಾರದಲ್ಲಿ 21 ದಿನಗಳ ವಾಸ್ತವ್ಯದ ಒಟ್ಟು ಮೊತ್ತ ಲಕ್ಷಾಂತರ ರೂಪಾಯಿಗಳಾಗಿದ್ದು, ಪ್ರಸ್ತುತ ಈ ಐಷಾರಾಮಿ ಜೀವನದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

