ಬೆಂಗಳೂರು: ಲಕ್ಷದ್ವೀಪದ ನೀಲಿ ಸಮುದ್ರ, ಬಿಳಿ ಮರಳಿನ ಕಡಲತೀರ ಹಾಗೂ ಹವಳದ ದಿಬ್ಬಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಯಸುವ ಪ್ರವಾಸಿಗರಿಗೆ ಇದೀಗ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ. ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ ಸಂಪರ್ಕದೊಂದಿಗೆ ಹೊಸ ಹಾಲಿಡೇ ಪ್ಯಾಕೇಜ್‌ಗಳು ಲಭ್ಯವಾಗಲಿವೆ.ಆನ್‌ಲೈನ್ ಟ್ರಾವೆಲ್ ಸಂಸ್ಥೆ ಮೇಕ್‌ಮೈಟ್ರಿಪ್, ಪ್ರಾದೇಶಿಕ ವಿಮಾನಯಾನ ಸಂಸ್ಥೆ ಫ್ಲೈ91 ಜೊತೆಗೂಡಿ ಈ ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ.
ನವೆಂಬರ್‌ನಿಂದ ವಿಮಾನ ಸೇವೆ ಆರಂಭ
ಈ ವಿಶೇಷ ವಿಮಾನ ಸೇವೆಯು 2026ರ ನವೆಂಬರ್ 12 ರಿಂದ ಆರಂಭವಾಗಲಿದ್ದು, 2027ರ ಜನವರಿ ಮಧ್ಯದವರೆಗೆ ಲಭ್ಯವಿರಲಿದೆ. ಲಕ್ಷದ್ವೀಪಕ್ಕೆ ಭೇಟಿ ನೀಡಲು ನವೆಂಬರ್‌ನಿಂದ ಜನವರಿ ಅತ್ಯಂತ ಪ್ರಶಸ್ತವಾದ ಸಮಯ ಆಗಿರುವುದರಿಂದ, ಪ್ರತಿ ನಾಲ್ಕು ದಿನಗಳಿಗೊಮ್ಮೆ ಬೆಂಗಳೂರಿನಿಂದ ಲಕ್ಷದ್ವೀಪದ ‘ಅಗತ್ತಿ’ ದ್ವೀಪಕ್ಕೆ ವಿಮಾನಗಳು ಹಾರಾಟ ನಡೆಸಲಿವೆ.
ಬೆಂಗಳೂರು ನಗರವು ದೇಶದ ಇತರೆ ಪ್ರಮುಖ ನಗರಗಳೊಂದಿಗೆ ಅತ್ಯುತ್ತಮ ಸಂಪರ್ಕ ಹೊಂದಿರುವುದರಿಂದ, ಕೇವಲ ದಕ್ಷಿಣ ಭಾರತೀಯರಿಗೆ ಮಾತ್ರವಲ್ಲದೆ ಇಡೀ ದೇಶದ ಪ್ರವಾಸಿಗರಿಗೆ ಲಕ್ಷದ್ವೀಪ ತಲುಪಲು ಬೆಂಗಳೂರು ಮುಖ್ಯ ಹೆಬ್ಬಾಗಿಲಾಗಲಿದೆ.
ಪ್ಯಾಕೇಜ್ ದರ ಎಷ್ಟು? ವಿಶೇಷತೆಗಳು ಏನು?
ಲಕ್ಷದ್ವೀಪ ಪ್ರವಾಸವನ್ನು ಸುಲಭವಾಗಿ ಪ್ಲ್ಯಾನ್ ಮಾಡಿಕೊಳ್ಳಲು ಬಯಸುವವರಿಗೆ ಈ ಪ್ಯಾಕೇಜ್ ಹಲವು ಸೌಲಭ್ಯಗಳನ್ನು ಒಂದೇ ಕಡೆ ಒದಗಿಸುತ್ತದೆ. 4 ದಿನ, 3 ರಾತ್ರಿಗಳ ಈ ಪ್ಯಾಕೇಜ್ ₹84,898ರಿಂದ ಆರಂಭವಾಗಲಿದ್ದು, ವಿಮಾನ ಪ್ರಯಾಣದಿಂದ ವಸತಿ, ಊಟ ಹಾಗೂ ಸ್ಥಳೀಯ ಚಟುವಟಿಕೆಗಳವರೆಗೆ ಹಲವು ಸೌಲಭ್ಯಗಳು ಇದರಲ್ಲಿ ಸೇರಿವೆ. ಪ್ರವಾಸಿಗರು ಹೆಚ್ಚುವರಿ ಶುಲ್ಕ ನೀಡಿ ಸಾಹಸಮಯ ಜಲಕ್ರೀಡೆಗಳನ್ನೂ ಅನುಭವಿಸಬಹುದು.
ಪ್ಯಾಕೇಜ್‌ನಲ್ಲಿರುವ ಸಾಮಾನ್ಯ ಚಟುವಟಿಕೆಗಳ ಜೊತೆಗೆ, ಪ್ರವಾಸಿಗರು ಹೆಚ್ಚುವರಿ ಶುಲ್ಕ ನೀಡಿ ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್, ಆಮೆಗಳ ವೀಕ್ಷಣೆ, ಕಯಾಕಿಂಗ್, ಗ್ಲಾಸ್-ಬಾಟಮ್ ಬೋಟ್ ರೈಡ್ ಹಾಗೂ ಯೋಗ-ಧ್ಯಾನದಂತಹ ಚಟುವಟಿಕೆಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಬಹುದು.
ಲಕ್ಷದ್ವೀಪ ಸಂಪರ್ಕ ಸಮಸ್ಯೆಗೆ ಮುಕ್ತಿ
“ಲಕ್ಷದ್ವೀಪಕ್ಕೆ ಭೇಟಿ ನೀಡಲು ಜನರಿಗೆ ಅಪಾರ ಆಸಕ್ತಿಯಿತ್ತು, ಆದರೆ ನೇರ ಮತ್ತು ಸುಲಭ ಪ್ರಯಾಣದ ಕೊರತೆಯಿತ್ತು. ಈ ಪಾಲುದಾರಿಕೆಯು ಆ ಕೊರತೆಯನ್ನು ನೀಗಿಸಲಿದೆ,” ಎಂದು ಮೇಕ್‌ಮೈಟ್ರಿಪ್‌ನ ಚೀಫ್ ಬಿಸಿನೆಸ್ ಆಫೀಸರ್ ಜಸ್ಮೀತ್ ಸಿಂಗ್ ಹೇಳಿದ್ದಾರೆ..
ಫ್ಲೈ91 ಸಂಸ್ಥೆಯ ಎಂಡಿ ಮತ್ತು ಸಿಇಒ ಮನೋಜ್ ಚಾಕೋ ಮಾತನಾಡಿ, “ಅಗತ್ತಿ ಭಾರತದ ಅತ್ಯಂತ ಸುಂದರ ಹಾಗೂ ನೈಸರ್ಗಿಕ ತಾಣಗಳಲ್ಲಿ ಒಂದಾಗಿದೆ. ಪ್ರಯಾಣಿಕರಿಗೆ ಕೇವಲ ವಿಮಾನಯಾನ ಮಾತ್ರವಲ್ಲದೆ, ನೆನಪಿನಲ್ಲಿ ಉಳಿಯುವಂತಹ ಅದ್ಭುತ ರಜಾದಿನಗಳ ಅನುಭವವನ್ನು ನೀಡುವುದು ನಮ್ಮ ಉದ್ದೇಶ,” ಎಂದು ವಿವರಿಸಿದ್ದಾರೆ.
ಈ ಆಕರ್ಷಕ ಲಕ್ಷದ್ವೀಪ ಹಾಲಿಡೇ ಪ್ಯಾಕೇಜ್‌ಗಳನ್ನು ಮೇಕ್‌ಮೈಟ್ರಿಪ್‌ನ ಆ್ಯಪ್, ಅಧಿಕೃತ ವೆಬ್‌ಸೈಟ್ ಅಥವಾ ಅದರ ಫ್ರಾಂಚೈಸಿ ಕೇಂದ್ರಗಳ ಮೂಲಕ ಸುಲಭವಾಗಿ ಬುಕ್ ಮಾಡಿಕೊಳ್ಳಬಹುದಾಗಿದೆ.

