HomeIndiaಕಣ್ಣಂಚನ್ನು ತೇವಗೊಳಿಸುತ್ತೆ ಬರಿಗಾಲಲ್ಲಿ ಓಡಿ ಮ್ಯಾರಥಾನ್ ಗೆದ್ದ ತಾಯಿಯ ಕಥೆ !

ಕಣ್ಣಂಚನ್ನು ತೇವಗೊಳಿಸುತ್ತೆ ಬರಿಗಾಲಲ್ಲಿ ಓಡಿ ಮ್ಯಾರಥಾನ್ ಗೆದ್ದ ತಾಯಿಯ ಕಥೆ !

ತಾಯಿಯೊಬ್ಬಳು ತನ್ನ ಮಕ್ಕಳ ಭವಿಷ್ಯಕ್ಕಾಗಿ ಎಂಥ ತ್ಯಾಗಕ್ಕೂ ಸಿದ್ಧಳಿರುತ್ತಾಳೆ ಎಂಬುದಕ್ಕೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿರುವ ಈ ಮನಕಲಕುವ ಘಟನೆಯೇ ಸಾಕ್ಷಿ. ಸ್ಥಳೀಯ ಸಂಸ್ಥೆಯೊಂದು ಆಯೋಜಿಸಿದ್ದ ‘ಅಮೃತ್ ದೌಡ್’ ಮ್ಯಾರಥಾನ್ ಕೇವಲ ಸ್ಪರ್ಧೆಯಾಗಿರದೆ, 47 ವರ್ಷದ ರಮಾಬಾಯಿ ರಣವೀರ್ ಪಾಲಿಗೆ ತಮ್ಮ ಇಬ್ಬರು ಹೆಣ್ಣುಮಕ್ಕಳ ಶಿಕ್ಷಣದ ಭವಿಷ್ಯದ ಓಟವಾಗಿತ್ತು. ಸೀರೆಯುಟ್ಟು, ಕೈಯಲ್ಲಿ ಚಪ್ಪಲಿ ಹಿಡಿದು ಬರಿಗಾಲಲ್ಲಿ ಕಲ್ಲು-ಮುಳ್ಳಿನ ರಸ್ತೆಯಲ್ಲಿ ಓಡಿದ ಆ ತಾಯಿ ಕೊನೆಗೂ ಪ್ರಥಮ ಸ್ಥಾನ ಪಡೆದು ₹3,000 ನಗದು ಬಹುಮಾನ ಗೆದ್ದು ಬೀಗಿದ್ದಾರೆ.

ಕೈಕೊಟ್ಟ ಚಪ್ಪಲಿ, ಬರಿಗಾಲಲ್ಲೇ ಗುರಿ ಮುಟ್ಟಿದ ಛಲಗಾತಿ ಸ್ಪರ್ಧಾ ಕಣದಲ್ಲಿದ್ದ ಬಹುತೇಕ ಯುವತಿಯರು ಟ್ರ್ಯಾಕ್‌ಸೂಟ್ ಮತ್ತು ದುಬಾರಿ ರನ್ನಿಂಗ್ ಶೂ ಧರಿಸಿ ಸಜ್ಜಾಗಿದ್ದರೆ, ಅಂಬಾಜೋಗೈ ಪಟ್ಟಣದ ರಮಾಬಾಯಿ ಮಾತ್ರ ಸಾದಾ ಸೀರೆ ಮತ್ತು ಚಪ್ಪಲಿ ಧರಿಸಿ ಆರಂಭದ ಗೆರೆಯಲ್ಲಿ ನಿಂತಿದ್ದರು. ಛತ್ರಪತಿ ಶಿವಾಜಿ ಮಹಾರಾಜ್ ಚೌಕ್‌ನಿಂದ ಆರಂಭವಾಗಿ ಭಾಗ್ಯನಗರ ಚೌಕ್ ವರೆಗೆ ಸಾಗಿದ ಈ ಓಟದಲ್ಲಿ, ಸ್ಪರ್ಧೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ಅವರ ಚಪ್ಪಲಿ ಕಳಚಿಬಿದ್ದಿದೆ.

ಆದರೆ ಯಾವುದೇ ಕಾರಣಕ್ಕೂ ಓಟ ನಿಲ್ಲಿಸಬಾರದೆಂದು ನಿರ್ಧರಿಸಿದ ಅವರು, ಚಪ್ಪಲಿಯನ್ನು ಕೈಯಲ್ಲೇ ಹಿಡಿದು, ಸೀರೆಯ ಅಂಚನ್ನು ಬಿಗಿಯಾಗಿ ಹಿಡಿದುಕೊಂಡು ರಸ್ತೆಯ ಮೇಲಿದ್ದ ಕಲ್ಲು-ಕಲ್ಮಶಗಳ ನಡುವೆಯೂ ಬರಿಗಾಲಲ್ಲಿ ಧಾವಿಸಿದರು. ಎದುರಾಳಿಗಳೆಲ್ಲರನ್ನೂ ಹಿಂದಿಕ್ಕಿ ಅಂತಿಮ ಗೆರೆಯನ್ನು ಮೊದಲ ಸ್ಪರ್ಧಿಯಾಗಿ ದಾಟುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗರೆದರು. ವಿಶೇಷವೆಂದರೆ, ಇದೇ ಓಟದಲ್ಲಿ ಅವರ ಮಗಳು ದ್ವಿತೀಯ ಸ್ಥಾನ ಪಡೆದಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಷ್ಟದ ನಡುವೆಯೂ ಮಕ್ಕಳ ಶಿಕ್ಷಣದ ಕನಸು ಅಂಬಾಜೋಗೈ ಪಟ್ಟಣದ ಅಕಾಡೆಮಿಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ರಮಾಬಾಯಿ ಅವರ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಅಪಘಾತವೊಂದರಲ್ಲಿ ಪತಿಯನ್ನು ಕಳೆದುಕೊಂಡ ನಂತರ ಇಬ್ಬರು ಹೆಣ್ಣುಮಕ್ಕಳ ಜವಾಬ್ದಾರಿ ಅವರ ಹೆಗಲೇರಿತು. ಬಡತನ ಬೆನ್ನುಬಿದ್ದಿದ್ದರೂ, ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಮಹತ್ವಾಕಾಂಕ್ಷೆ ಅವರಿಗಿತ್ತು.

ಗೆಲುವಿನ ನಂತರ ಮಾತನಾಡಿದ ರಮಾಬಾಯಿ, “ನನಗಿಂತ ವಯಸ್ಸಿನಲ್ಲಿ ಕಿರಿಯರಾದ ಹಲವರು ಸ್ಪರ್ಧೆಯಲ್ಲಿದ್ದರು. ಆದರೆ ನಾನು ಓಡುವಾಗ ನನ್ನ ಕಣ್ಣಮುಂದೆ ನನ್ನ ಮಕ್ಕಳ ಮುಖ ಮತ್ತು ಅವರ ಭವಿಷ್ಯ ಮಾತ್ರ ಕಾಣುತ್ತಿತ್ತು. ಈ ಓಟದಲ್ಲಿ ಸಿಗುವ ₹3,000 ಬಹುಮಾನದಿಂದ ಮಕ್ಕಳಿಗೆ ಬೇಕಾದ ಪುಸ್ತಕಗಳನ್ನು ಖರೀದಿಸುತ್ತೇನೆ” ಎಂದು ಭಾವುಕರಾಗಿ ನುಡಿದರು.

ನೆಟ್ಟಿಗರ ಕಣ್ಣಂಚು ತೇವಗೊಳಿಸಿದ ತಾಯಿಯ ಪ್ರೇಮ ರಮಾಬಾಯಿ ಅವರ ಈ ಸಾಹಸದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅವರ ಛಲ ಮತ್ತು ತಾಯ್ತನದ ಪ್ರೀತಿಗೆ ತಲೆಬಾಗಿದ್ದಾರೆ. “ತಾಯಿಯ ಪ್ರೀತಿ ಎಂಥ ಕಠಿಣ ಹಾದಿಯನ್ನೂ ಸುಲಭವಾಗಿಸುತ್ತದೆ”, “ನೈಜ ಮಹಿಳಾ ಸಬಲೀಕರಣಕ್ಕೆ ಇವರೇ ನಿದರ್ಶನ” ಎಂದು ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಹಲವರು ಈ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದು, ರಮಾಬಾಯಿ ಅವರ ಸಂಪರ್ಕ ವಿವರಗಳನ್ನು ಕೋರುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular