ಬೆಂಗಳೂರು: ಬೆಂಗಳೂರಿನ ಕೋಗಿಲು ಲೇಔಟ್ ಬಳಿ ಜಿಬಿಎ ಅಧಿಕಾರಿಗಳು ಅಕ್ರಮ ನಿವಾಸಿಗಳ ಮನೆಗಳನ್ನು ತೆರವುಗೊಳಿಸಿದ್ದು, ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳು ಸ್ಥಳದಲ್ಲಿ ಪ್ರತಿಭಟನೆ ಮುಂದುವರೆಸಿವೆ. ಈ ಘಟನೆ ಬೆನ್ನಲ್ಲೇ ಕರ್ನಾಟಕದಲ್ಲಿ ಕೇರಳ ಸರ್ಕಾರ ರಾಜಕೀಯ ನಡೆಸುತ್ತಿದೆ. ಜಿಬಿಎ ಅಧಿಕಾರಿಗಳು ಅಕ್ರಮ ನಿವಾಸಿಗಳ ಮನೆ ತೆರವು ಕಾರ್ಯಾಚರಣೆ ಬೆನ್ನಲ್ಲೇ ಕೇರಳ ಸರ್ಕಾರದ ಸಂಸದರು, ಸಚಿವರು, ಶಾಸಕರು ಕೋಗಿಲು ಸ್ಥಳಕ್ಕೆ ಭೇಟಿ ನೀಡಿ ರಾಜಕೀಯ ನಡೆಸುತ್ತಿದ್ದಾರೆ.
ಪದೇ ಪದೇ ಕರ್ನಾಟಕದ ವಿಷಯಕ್ಕೆ ಕೇರಳ ಸರ್ಕಾರ ಮೂಗು ತೂರಿಸುತ್ತಿದ್ದು ಈಗ ಕೋಗಿಲು ಲೇಔಟ್ ಬಳಿ ಅಕ್ರಮ ನಿವಾಸಿಗಳ ತೆರವು ಬೆನ್ನಲ್ಲೇ ಬೆಂಗಳೂರಿನ ಕೋಗಿಲು ಬಳಿ ಕೇರಳ ರಾಜಕೀಯ ನಾಯಕರ ದಂಡೆ ಆಗಮಿಸುತ್ತಿದೆ. ಕೇರಳ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಕೆಸರೆರಚಾಟಕ್ಕೆ ಕೇರಳ ನಾಯಕರು, ಕರ್ನಾಟಕ ಸರ್ಕಾರದ ತೀರ್ಮಾನಗಳನ್ನು ಬಳಸಿಕೊಳ್ಳಲಾರಂಭಿಸಿದ್ದಾರೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ಕರ್ನಾಟಕ ಸರ್ಕಾರದಿಂದಲೂ ಬುಲ್ಡೋಜರ್ ರಾಜ್ ಆಗುತ್ತಿದೆ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ರಾಜಕೀಯ ಜಟಾಪಟಿ ತೀವ್ರಗೊಂಡಿದೆ. ಮನೆ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದ್ದರೂ ಕೇರಳ ರಾಜಕೀಯ ಮಾತ್ರ ನಿಂತಿಲ್ಲ. ನಿನ್ನೆ ಕೇರಳ ಸಂಸದ ಎ.ಎ.ರಹಿಂ ಕೋಗಿಲು ಸ್ಥಳಕ್ಕೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಕೇರಳ ಸರ್ಕಾರದ ಮಾಜಿ ಸಚಿವ , ಶಾಸಕ ಜಲೀಲ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಕೇರಳ ನಿಯೋಗ ಕೂಡ ಭೇಟಿ ನೀಡಿ ಸಂತ್ರಸ್ತ ಪ್ರತಿಭಟನಾಕಾರರಿಂದ ಮಾಹಿತಿ ಪಡೆದಿದೆ.

