ಬೆಳಗಾವಿ: ಸಾಮಾನ್ಯ ಜನರದ್ದು ಒಂದು ಮಾರ್ಗವಾದರೆ ಕುಡುಕರದ್ದೇ ಒಂದು ದಾರಿ. ಕುಡುಕು ವ್ಯಕ್ತಿಯೊಬ್ಬ ತಾನು ದಾರಿ ತಪ್ಪಿದ್ದೂ ಅಲ್ಲದೇ ಇನ್ನೂ ಪ್ರಪಂಚ ಜ್ಞಾನವೇ ಸರಿಯಾಗಿ ಇಲ್ಲದ ಮುದ್ದು ಮೊಮ್ಮಗನನ್ನೂ ದಾರಿ ತಪ್ಪಿಸಿದ್ದು, ಐದು ವರ್ಷದ ಮಗುವಿಗೆ ಮದ್ಯ ಕುಡಿಸಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಲು ಕುಡಿಸಿ ಬೆಳೆಸಬೇಕಿದ್ದ ಐದು ವರ್ಷದ ಮೊಮ್ಮಗನನ್ನು ಪಾಪಿ ಅಜ್ಜ, ಬಾರಿಗೆ ಕರೆದೊಯ್ದು ಎಣ್ಣೆ ಕುಡಿಸಿದ್ದಾನೆ. ಬಾರ್ ನಲ್ಲಿದ್ದ ಕೆಲವರು ಮಗುವಿಗೆ ಮದ್ಯ ಕುಡಿಸಿದಂತೆ ಹೇಳುತ್ತಿದರೂ ಕೇಳದೇ ಬಲವಂತವಾಗಿ ಮದ್ಯ ಕುಡಿಸಿದ್ದಾನೆ. ಬಳಿಕ ತಾನೂ ಕಂಠಪೂರ್ತಿ ಕುಡಿದು ತೂರಾಡಿದ್ದಾನೆ.
ಬಾರಿನಲ್ಲಿದ್ದವರು ಮಗುವನ್ನು ಕರೆದುಕೊಂಡು ಬರದಂತೆ, ಮದ್ಯ ಕೊಡದಂತೆ ತಡೆಯುವುದು ಬಿಟ್ಟು ತಾತನಿಗೆ ಬುದ್ಧಿ ಹೇಳುತ್ತಾ ಕುಳಿತಿದ್ದಾರೆ. ತಾತ ತನ್ನ ಮಕ್ಕಳು ಕುಡಿಯುವುದಿಲ್ಲ, ಮಗುವಿನ ತಂದೆಯೂ ಕುಡಿಯುವುದಿಲ್ಲ. ನಮ್ಮಪ್ಪ ಕುಡಿಯುತ್ತಿದ್ದ. ನಾನು ಕುಡಿಯುತ್ತೇನೆ ಎನ್ನುತ್ತ ಮಗುವಿಗೆ ಗ್ಲಾಸ್ ನಲ್ಲಿ ಮತ್ತೆ ಮದ್ಯ ಕುಡಿಯಲು ಕೊಟ್ಟಿದ್ದಾನೆ. ಏನೂ ಅರಿಯದ ಮಗು ಮದ್ಯವನ್ನು ನಿರಾಯಾಸವಾಗಿ ಕುಡಿದು ಕುಳಿತಿದೆ. ದುಷ್ಟ ಅಜ್ಜನ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಜ್ಜನ ವಿರುದ್ಧ ಮಾತ್ರವಲ್ಲ, ಬಾರ್ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

