ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಹಿಳೆಯರಿಗೆ ಸುರಕ್ಷಿತವಲ್ಲವೇ? ಎಂಬ ಪ್ರಶ್ನೆ ಪದೇ ಪದೇ ಮೂಡುವಂತೆ ಮಾಡುವಂತಹ ಘಟನೆಗಳು ಮನೆಯಲ್ಲಿದ್ದ ಯುವತಿಯೊಬ್ಬಳನ್ನು ದುಷ್ಕರ್ಮಿಗಳು ಕಿಡ್ನ್ಯಾಪ್ ಮಡಲು ಯತ್ನಿಸಿರುವ ಘತನೆ ನಡೆದಿದೆ.
ಬೆಂಗಳುರಿನ ಕೆ.ಪಿ ಅಗ್ರಹಾರ ದಾಸರಹಳ್ಳಿಯ ಮನೆಯಲ್ಲಿದ್ದ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಪರಾರಿಯಾಗುತ್ತಿದ್ದ ವೇಳೆ ಅಪಹರಣಕಾರ ಕಾರು, ಎದುರಿಗೆ ಸಿಕ್ಕ ಜಡ್ಜ್ ಹಾಗೂ ಪೊಲೀಸರ ಕಾರು ಸೇರಿದಂತೆ 35ಕ್ಕೂ ಹೆಚ್ಚು ಕಾರುಗಳು, 100ಕ್ಕೂ ಹೆಚ್ಚು ಬೈಕ್ಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ರಾಜಸ್ಥಾನದಿಂದ ಬಂದ ಗ್ಯಾಂಗ್ ನಿಂದ ಈ ಕೃತ್ಯ ನದೆದಿದ್ದು, ಘಟನೆಯಲ್ಲಿ 6ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೃಥ್ವಿರಾಜ್ (12), ಯಶಿಕಾ (9) ಅಮುಲ್ (35), ವರ್ಷ, ಮಣಿ (64) ಜಯಲಕ್ಷ್ಮೀ (57) ಗಾಯಗೊಂಡವರು. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 30ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ರಾಜಸ್ಥಾನದ ಪೂಜಾ ಎಂಬ ಯುವತಿ ತಾನು ಪ್ರೀತಿಸಿದ್ದ ಯುವಕನನ್ನು ಮದುವೆಯಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದಳು. ಕಳೆದ 9 ತಿಂಗಳಿಂದ ಕೆ.ಪಿ.ಅಗ್ರಹಾರ ದಾಸರಹಳ್ಳಿಯಲ್ಲಿ ಈ ಜೋಡಿ ವಾಸವಾಗಿದ್ದರು. ಮದುವೆಯಾದ ನಂತರ ಸೋದರತ್ತೆಯ ಜೊತೆ ಪೂಜಾ ಸಂಪರ್ಕದಲ್ಲಿದ್ದಳು. ಇತ್ತೀಚೆಗೆ ಯುವತಿಯ ಬಳಿ ಆಕೆಯ ಅತ್ತೆ ವಿಳಾಸ ಪಡೆದಿದ್ದಳಂತೆ. ಆರೋಪಿಗಳಿಗೆ ಯುವತಿಯ ಸೋದರತ್ತೆಯೇ ಕಿಡ್ನ್ಯಾಪ್ ಮಾಡಿಕೊಂಡು ಬರಲು ಸುಪಾರಿ ಕೊಟ್ಟಿರುವುದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ರಾಜಸ್ಥಾನದಿಂದ ಬೆಂಗಳೂರಿನ ಕೆ.ಪಿ ಅಗ್ರಹಾರ ದಾಸರಹಳ್ಳಿ ಮನೆಗೆ ಬಂದ ಗ್ಯಾಂಗ್ ಯುವತಿಯನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ಅಪಹರಣಕಾರರ ಕಾರನ್ನು ಸ್ಥಳೀಯರು ಬೆನ್ನಟ್ಟಿದ್ದಾರೆ. ಸಾರ್ವಜನಿಕರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಅಪಹರಣಕಾರರು ಕಾರನ್ನು ಅಡ್ಡಾದಿಡ್ಡಿ ಓಡಿಸಿದ್ದಾರೆ. ಈ ವೇಳೆ ಕಾರು 35ಕ್ಕೂ ಹೆಚ್ಚು ಕಾರು, 100ಕ್ಕೂ ಹೆಚ್ಚು ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ.
ಈ ವೇಳೆ ಜಡ್ಜ್ ವಾಹನಕ್ಕೆ ಹಾಗೂ ಪೊಲಿಸರ ವಾಹನಕ್ಕೂ ಕಾರು ಡಿಕ್ಕಿ ಹೊಡೆದಿದೆ. ಸುಮಾರು 9 ಕಿಮೀ ಚೇಸ್ ಮಾಡಿ ಸಾರ್ವಜನಿಕರು ವಿಜಯನಗರ ಹೊಸಹಳ್ಳಿ 4ನೇ ಅಡ್ಡರಸ್ತೆಯಲ್ಲಿ ದುಷ್ಕರ್ಮಿಗಳ ಕಾರನ್ನು ಅಡ್ಡಗಟ್ಟಿದ್ದಾರೆ.
ಸಾರ್ವಜನಿಕರು ಕಿಡ್ನಾಪರ್ಸ್ ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಜಖಂಗೊಳಿಸಿದ್ದಾರೆ. ಕಾರಿನಲ್ಲಿದ್ದ ಮೂವರನ್ನ ಹೊರಗೆಳೆದು ಮನ ಬಂದಂತೆ ಥಳಿಸಿದ್ದಾರೆ. ಬಳಿಕ ಆರೋಪಿಗಳನ್ನು ವಿಜಯ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳಾದ ರಾಕೇಶ್ (31) ಕರಣ್ (35) , ಆಯನ್ (18) ಎಂಬುವವರನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಆರೋಪಿ ಸದ್ದಾಂ ಎಸ್ಕೇಪ್ ಆಗಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಯುವತಿಯ ಕಿಡ್ನ್ಯಾಪ್ ಹಿಂದಿನ ರಹಸ್ಯ ಬಯಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರೋಡ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಎಸ್ಕೇಪ್ ಆಗಿರುವ ಕಾರು ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.

