ಕೇಂದ್ರ ಸರ್ಕಾರ 2026ನೇ ಸಾಲಿನ ಬಜೆಟ್‌ನಲ್ಲಿ 7 ಹೈಸ್ಪೀಡ್ ರೈಲು ಯೋಜನೆಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಕರ್ನಾಟಕದಲ್ಲಿ ಬೆಂಗಳೂರು-ಹೈದರಾಬಾದ್ ನಡುವಿನ ಕಾರಿಡಾರ್ ಸಹ ಒಂದಾಗಿದೆ. ಬೆಂಗಳೂರು-ಹೈದರಾಬಾದ್ ನಡುವಿನ ಸಂಚಾರ ಸಮಯ ಕಡಿತಗೊಳಿಸುವ ಮಹತ್ವದ ಯೋಜನೆ ಇದಾಗಿದೆ.
626 ಕಿ.ಮೀ. ಉದ್ದದ ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು ಯೋಜನೆ ಕುರಿತು ಮಹತ್ವದ ಅಪ್‌ಡೇಟ್ ಒಂದು ಲಭ್ಯವಾಗಿದೆ. ಯೋಜನೆಗೆ ಅಗತ್ಯವಿರುವ ಭೂ ಸ್ವಾಧೀನ ಕುರಿತು ಕರ್ನಾಟಕ ಸರ್ಕಾರದ ಜೊತೆ ಮಹತ್ವದ ಸಭೆ ನಡೆದಿದೆ.
ಕೇಂದ್ರದ ರೈಲ್ವೆ ಸಚಿವಾಲಯದ ಅಧಿಕಾರಿಗಳ ತಂಡ ಕರ್ನಾಟಕಕ್ಕೆ ಆಗಮಿಸಿತ್ತು. ರೈಲು ಮಾರ್ಗದ ವಿನ್ಯಾಸ, ಭೂ ಸ್ವಾಧೀನದ ಕುರಿತು ಮೂಲ ಸೌಲಭ್ಯ ಇಲಾಖೆಯ ಜೊತೆ ಮಹತ್ವದ ಸಭೆಯನ್ನು ನಡೆಸಿದೆ. ಈ ಮೂಲಕ ಬಜೆಟ್‌ನಲ್ಲಿ ಘೋಷಣೆ ಮಾಡಲಾದ ಯೋಜನೆಯ ಪ್ರಾಥಮಿಕ ಕೆಲಸಕ್ಕೆ ಚಾಲನೆ ಸಿಕ್ಕಿದೆ.
ಹೈಸ್ಪೀಡ್ ರೈಲು ಯೋಜನೆ: ಐಟಿ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನ ಪಡೆದಿರುವ ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ಸಂಪರ್ಕ ಉತ್ತಮಗೊಳಿಸುವುದು ಯೋಜನೆಯ ಉದ್ದೇಶವಾಗಿದೆ.
ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಮುಕ್ತಾಯಗೊಂಡು ರೈಲು ಸಂಚಾರ ಆರಂಭವಾದರೆ ಬೆಂಗಳೂರು-ಹೈದರಾಬಾದ್ ನಡುವಿನ ಸಂಚಾರದ ಅವಧಿ 1.55 ಗಂಟೆಯಿಂದ 2 ಗಂಟೆಗೆ ಇಳಿಕೆಯಾಗಲಿದೆ.
ಪ್ರಸ್ತುತ ಉಭಯ ನಗರದ ಸಂಚಾರದ ಅವಧಿ 8.5 ಗಂಟೆಗಳು. ಈ ಮಾರ್ಗದಲ್ಲಿ ಈಗ ಸಂಚಾರ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 8.15 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.
ಮೂಲ ಸೌಲಭ್ಯ ಇಲಾಖೆ ಮಾಹಿತಿಗಳ ಪ್ರಕಾರ ಹಾಲಿ ಇರುವ ರೈಲು ಮಾರ್ಗಕ್ಕಿಂತ ಬೆಂಗಳೂರು-ಹೈದರಾಬಾದ್ ನಡುವೆ ಹೈಸ್ಪೀಡ್ ರೈಲು ಯೋಜನೆಗಾಗಿ ಹೊಸ ಮಾರ್ಗ ನಿರ್ಮಾಣ ಮಾಡಲಾಗುತ್ತದೆ.
ಈ ಮಾರ್ಗದಲ್ಲಿ ರೈಲು ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಂಚಾರ ನಡೆಸುವಂತೆ ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ರೈಲುಗಳು ಗಂಟೆಗೆ 320 ಕಿ.ಮೀ. ವೇಗದಲ್ಲಾದರೂ ಸಂಚಾರ ನಡೆಸಬೇಕಿದೆ.
ಆಐಟಿಇಎಸ್ ಲಿಮಿಟೆಡ್ ಅಂತಿಮ ಸ್ಥಳ ಸಮೀಕ್ಷೆಯನ್ನು ನಡೆಸುತ್ತಿದೆ. ಮಾರ್ಚ್ ಅಂತ್ಯದ ವೇಳೆಗೆ ಇದು ಪೂರ್ಣಗೊಳ್ಳಲಿದ್ದು, ಬಳಿಕ ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರು ಮಾಡಲಾಗುತ್ತದೆ.
ಈಗಾಗಲೇ ಕೇಂದ್ರ ಸರ್ಕಾರ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯ ಭೂ ಸ್ವಾಧೀನ ಸೇರಿದಂತೆ ಇತರ ಮಾಹಿತಿ ನೀಡಲು, ಸಮನ್ವಯ ಸಾಧಿಸಲು ನೋಡೆಲ್ ಅಧಿಕಾರಿ ನೇಮಕ ಮಾಡಬೇಕು ಎಂದು ರಾಜ್ಯಗಳಿಗೆ ಸೂಚನೆ ನೀಡಿದೆ.
ಈ ರೈಲು ಕಾರಿಡಾರ್‌ನಲ್ಲಿ ಕರ್ನಾಟಕದಲ್ಲಿ ಕೇವಲ ಮೂರು ನಿಲ್ದಾಣಗಳು ಬರುತ್ತವೆ. ಅಲಿಪುರ, ದೇವನಹಳ್ಳಿ, ಕೋಡಿಹಳ್ಳಿ ನಿಲ್ದಾಣಗಳು ಬರಲಿವೆ ಎಂದು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಕೋಡಿಹಳ್ಳಿ ನಿಲ್ದಾಣ ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್‌ಗೂ ಸಂಪರ್ಕ ಕಲ್ಪಿಸಲಿದ್ದು, ಇದು ಪ್ರಮುಖ ಇಂಟರ್ ಚೇಂಜ್ ನಿಲ್ದಾಣವಾಗಲಿದೆ.
ಸದ್ಯದ ವಿನ್ಯಾದ ಪ್ರಕಾರ ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ಕಾರಿಡಾರ್‌ನಲ್ಲಿ 12 ನಿಲ್ದಾಣಗಳು ಬರಲಿವೆ. ಈ ಕಾರಿಡಾರ್ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಸಂಪರ್ಕವನ್ನು ಇನ್ನಷ್ಟು ಉತ್ತಮಗೊಳಿಸಲಿದೆ ಎಂದು ಅಂದಾಜಿಸಲಾಗಿದೆ.
ಈ ರೈಲು ಯೋಜನೆಗೆ ಕರ್ನಾಟಕ ಸಂಪೂರ್ಣ ಬೆಂಬಲ ನೀಡಲಿದೆ. ರಾಜ್ಯದ ಆರ್ಥಿಕ, ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ಯೋಜನೆ ಅತ್ಯಂತ ಮಹತ್ವಾದ್ದಾಗಿದೆ ಎಂದು ಕೈಗಾರಿಕೆ ಮತ್ತು ಮೂಲ ಸೌಲಭ್ಯ ಖಾತೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

