ಬೆಂಗಳೂರು: ಜಿಎಸ್‌ಟಿ ವಿಚಾರದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಹೇಳಿ ಕಬ್ಬಿಣದ ಅಂಗಡಿ ಮಾಲೀಕರಿಂದ ₹20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹8 ಲಕ್ಷ ಸ್ವೀಕರಿಸುವ ವೇಳೆ ಜಿಎಸ್‌ಟಿ ಅಧೀಕ್ಷಕರೊಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ನಗರ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಜಿಎಸ್‌ಟಿ ಅಧೀಕ್ಷಕ ಮೋಹಿತ್ ಪ್ರತಾಪ್ ಸಿಂಗ್ ಸಿಕ್ಕಿಬಿದ್ದಿದ್ದಾರೆ. ಕಬ್ಬಿಣದ ಅಂಗಡಿ ಮಾಲೀಕ ಜಮೀರ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಜಮೀರ್ ಅವರ ಅಂಗಡಿಗೆ ಸಂಬಂಧಿಸಿದ ಜಿಎಸ್‌ಟಿ ವಿಚಾರದಲ್ಲಿ ಸಮಸ್ಯೆ ಉಂಟಾಗಿತ್ತು ಎನ್ನಲಾಗಿದ್ದು, ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಅಧಿಕಾರಿ ₹20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಜಮೀರ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ₹8 ಲಕ್ಷ ಲಂಚದ ಹಣ ಸ್ವೀಕರಿಸುವ ವೇಳೆ ಮೋಹಿತ್ ಪ್ರತಾಪ್ ಸಿಂಗ್ ಅವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಾಂಸಹಾರಿ ಹೊಟೇಲ್‌ಗಳ ಮೇಲೆ ದಾಳಿ : ಸ್ವಚ್ಚತೆ ಕಾಪಾಡದಿದ್ದಲ್ಲಿ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ
ಶಿವಮೊಗ್ಗ : ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ತಿಲಕ್‌ನಗರದಲ್ಲಿರುವ ಮಾಂಸಾಹಾರಿ ಹೊಟೇಲ್‌ಗಳ ಮೇಲೆ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ|| ಮೈತ್ರಿ ಅವರು ಕಂದಾಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳೊಂದಿಗೆ ದಿಢೀರ್‌ದಾಳಿ ನಡೆಸಿ, ಹೊಟೇಲ್‌ಗಳ ಶುಚಿತ್ವ, ಆಹಾರದ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿದರು.
ಪರಿಶೀಲನೆ ಸಂದರ್ಭದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳದಿರುವ ಮಾಂಸಹಾರಿ ಹೊಟೇಲ್‌ಗಳ ಮಾಲೀಕರಿಗೆ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಸೂಚಿಸಿದ ಅವರು, ಸ್ವಚ್ಚತೆ ಕಾಪಾಡಿಕೊಳ್ಳದಿದ್ದಲ್ಲಿ ಶುದ್ಧ ನೀರು ಬಳಸಿ ಆಹಾರ ತಯಾರಿಸದಿದ್ದಲ್ಲಿ ಹಾಗೂ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಪೂರೈಸದಿದ್ದಲ್ಲಿ ಹೊಟೇಲ್‌ಗಳ ಪರವಾನಿಗೆ ರದ್ದುಗೊಳಿಸುವುದಾಗಿ ಎಚ್ಚರಿಸಿದ ಅವರು, ಹೊಟೇಲ್‌ಗಳಲ್ಲಿದ್ದ ಆಹಾರದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗಾಗಿ ಕಳುಹಿಸಿಕೊಡಲಾಗುವುದು ಎಂದರು.
ಆಹಾರ ತಯಾರಿಕೆಯಲ್ಲಿ ಬಣ್ಣ, ಮತ್ತಿತರ ಕ್ಯಾನ್ಸರ್‌ಕಾರಕ ರಸಾಯನಿಕಗಳ ಬಳಕೆ ಕಂಡುಬಂದಲ್ಲಿ ಹೊಟೇಲ್‌ಗಳ ಪರವಾನಿಗೆ ರದ್ದುಗೊಳಿಸಲಾಗುವುದಲ್ಲದೆ ನಿಯಾಮಾನುಸಾರ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡುವುದು ಅನಿವಾರ್ಯವಾಗಲಿದೆ ಎಂದ ಅವರು, ಅಶುಚಿಯಾಗಿರುವ ಹೊಟೇಲ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳದಿರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದಲ್ಲದೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಸಕ್ಷಮ ಪ್ರಾಧಿಕಾರಿಗಳಿಗೆ ವರದಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ|| ಚಂದ್ರಶೇಖರ್, ತಹಶೀಲ್ದಾರ್‌ರಾಜೀವ್, ಕಂದಾಯಾಧಿಕಾರಿ ಸತೀಶ್, ಕಂದಾಯ ನಿರೀಕ್ಷಕ ಹೊತ್ತಾರೆ ಶಿವಕುಮಾರ್, ದೀಪಕ್‌ಬಿ., ವಿನಾಯಕಸ್ವಾಮಿ ಜಿ.ಎಂ., ನಿಂಗರಾಜಪ್ಪ, ಮೋಹನ್‌ಕುಮಾರ್‌ಮತ್ತಿತರರು ಉಪಸ್ಥಿತರಿದ್ದರು.
ಗ್ರಾಹಕರಿಗೆ ಪರಿಹಾರ ಮತ್ತು ದಂಡ ವಿಧಿಸಿ ಶಿವಮೊಗ್ಗ ಜಿಲ್ಲಾ ಗ್ರಾಹಕರ ಆಯೋಗ ಆದೇಶ
ಶಿವಮೊಗ್ಗ : ವಾಹನವನ್ನು ದೂರುದಾರರ ಹೆಸರಿಗೆ ವರ್ಗಾಯಿಸಿಕೊಡದೆ ಮತ್ತು ಸೂಕ್ತ ಮಾಹಿತಿ ನೀಡದೆ ವಾಹನವನ್ನು ವಶಕ್ಕೆ ಪಡೆದುಕೊಂಡು ಸೇವಾ ನ್ಯೂನತೆ ಎಸಗಿದ ಬ್ಯಾಂಕ್‌ಗೆ ಶಿವಮೊಗ್ಗದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ರೂ.1.10 ಲಕ್ಷ ದಂಡ ಹಾಗೂ ಪರಿಹಾರ ಪಾವತಿಸುವಂತೆ ಆದೇಶ ನೀಡಿದೆ.
ಶಿವಮೊಗ್ಗ ತಾಲೂಕಿನ ಕುಸ್ಕೂರಿನ ನಿಖಿಲ್ ಆರ್. ಅವರು ಶಿವಮೊಗ್ಗದ ಶಂಕರ ಮಠ ರಸ್ತೆಯಲ್ಲಿರುವ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ವಿರುದ್ಧ ವಕೀಲರ ಮೂಲಕ ದೂರು ಸಲ್ಲಿಸಿದ್ದರು. ದೂರುದಾರರು ಫಯಾಜ್ ಬಿನ್ ಬಾಬು ಎಂಬುವರ ಹೆಸರಿನಲ್ಲಿದ್ದ ಐಷರ್ ಪ್ರೊ 3015 (ಸಂಖ್ಯೆ: KA-51-AF-9323) ಸರಕು ಸಾಗಣೆ ವಾಹನವನ್ನು ಖರೀದಿಸಿದ್ದು, ಎದುರುದಾರ ಬ್ಯಾಂಕ್‌ನಿಂದ ರೂ.13,50,000 ಸಾಲವನ್ನು 48 ಕಂತುಗಳಲ್ಲಿ ಪಾವತಿಸಲು ಮಂಜೂರು ಮಾಡಿಸಿಕೊಂಡಿದ್ದರು.
ವಾಹನವನ್ನು ದೂರುದಾರರ ಹೆಸರಿಗೆ ಆರ್‌ಟಿಒ ಮೂಲಕ ವರ್ಗಾಯಿಸಿಕೊಡಲು ತಗಲುವ ವೆಚ್ಚವನ್ನು ಬ್ಯಾಂಕ್ ಪಡೆದಿದ್ದರೂ, ಹೆಸರು ವರ್ಗಾವಣೆ ಮಾಡದೆ ವಿಳಂಬ ಧೋರಣೆ ಅನುಸರಿಸಿತ್ತು. ದೂರುದಾರರು ವಾಹನವನ್ನು ಉಪಯೋಗಿಸದೆಯೇ ₹90,000 ಇಎಮ್‌ಐ ಪಾವತಿಸಿದ್ದರು. ಆದರೆ, ಎದುರುದಾರ ಬ್ಯಾಂಕ್‌ನವರು ಸಾಲದ ಕಂತು ಪಾವತಿಯಾಗಿಲ್ಲವೆಂದು ನೆಪ ಒಡ್ಡಿ, ದಿನಾಂಕ 27/01/2026 ರಂದು ದೂರುದಾರರ ಮನೆಯ ಬಳಿ ನಿಲ್ಲಿಸಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದರು. ಇದನ್ನು ಪ್ರಶ್ನಿಸಿ ನಿಖಿಲ್ ಅವರು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.
ಆಯೋಗದ ತೀರ್ಪು:
ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಬ್ಯಾಂಕ್‌ನಿಂದ ಸೇವಾ ನ್ಯೂನತೆಯಾಗಿರುವುದನ್ನು ಎತ್ತಿಹಿಡಿದು ಆದೇಶಿಸಿದೆ:
ವಾಹನವನ್ನು ವಶಕ್ಕೆ ಪಡೆಯದೇ ದೂರುದಾರರ ಹೆಸರಿಗೆ ದಾಖಲೆಗಳನ್ನು ವರ್ಗಾಯಿಸಿ, ದೂರುದಾರರ ವಶಕ್ಕೆ ನೀಡಬೇಕು.ಹೆಸರು ವರ್ಗಾವಣೆಯಾದ ನಂತರ ಸಾಲದ ಇಎಂಐ ಅನ್ನು ಆರ್‌ಬಿಐ ಸುತ್ತೋಲೆ ಮತ್ತು ನಿಯಮಾವಳಿಗಳಂತೆ ಮರುನಿಗದಿಪಡಿಸಬೇಕು.
ಮಾನಸಿಕ ಕಿರುಕುಳ ಮತ್ತು ಪರಿಹಾರವಾಗಿ ರೂ.1,00,000 ಹಾಗೂ ದೂರಿನ ಖರ್ಚುವೆಚ್ಚಕ್ಕಾಗಿ ರೂ.10,000 ಸೇರಿದಂತೆ ಒಟ್ಟು ರೂ.1,10,000 ಗಳನ್ನು 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇಕಡಾ 10 ರಷ್ಟು ಬಡ್ಡಿಯನ್ನು ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡತಕ್ಕದ್ದು ಎಂದು ಆಯೋಗವು ಸೆ. 08 ರಂದು ಆದೇಶಿಸಿದೆ

