ಬೆಂಗಳೂರು: ನೀವು ಕಡಿಮೆ ಬೆಲೆಯಲ್ಲಿ ಐಫೋನ್, ಐಪ್ಯಾಡ್, ಸ್ಮಾರ್ಟ್ ಟಿವಿ ಅಥವಾ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ವಶಪಡಿಸಿಕೊಂಡ ಬೆಲೆಬಾಳುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಬೆಂಗಳೂರು ಕಸ್ಟಮ್ಸ್ ಇಲಾಖೆಯು ಹರಾಜು ಹಾಕುತ್ತಿದೆ.
ಡಿಸೆಂಬರ್ 30 ರಂದು ಈ ಆನ್‌ಲೈನ್ ಹರಾಜು ಪ್ರಕ್ರಿಯೆ ನಡೆಯಲಿದ್ದು, ಸಾರ್ವಜನಿಕರು ಮನೆಯಲ್ಲೇ ಕುಳಿತು ತಮಗೆ ಬೇಕಾದ ವಸ್ತುಗಳನ್ನು ಬಿಡ್ ಮಾಡಬಹುದಾಗಿದೆ. ವಿದೇಶದಿಂದ ಬರುವಾಗ ದಾಖಲೆಗಳಿಲ್ಲದ ಕಾರಣ ಜಪ್ತಿ ಮಾಡಲಾದ ಸುಮಾರು 227ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ಸರಕುಗಳು ಈ ಹರಾಜಿನಲ್ಲಿ ಲಭ್ಯವಿವೆ.
ಖರೀದಿಸುವುದು ಹೇಗೆ? ನೋಂದಣಿ ವಿಧಾನ ಇಲ್ಲಿದೆ: ಈ ಹರಾಜಿನಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಸರ್ಕಾರದ ಅಧಿಕೃತ ಪೋರ್ಟಲ್ ಆದ MSTC ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಆ ಪ್ರಕ್ರಿಯೆ ಹೀಗಿದೆ:
- ಮೊದಲು MSTC ಇ-ಕಾಮರ್ಸ್ (mstcecommerce.com) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಮುಖಪುಟದಲ್ಲಿರುವ ‘Search Auction’ ಎಂಬ ನೀಲಿ ಬಣ್ಣದ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ‘Upcoming Auction’ ಆಯ್ಕೆಮಾಡಿ, ರಾಜ್ಯದ ಪಟ್ಟಿಯಲ್ಲಿ ಕರ್ನಾಟಕ ಮತ್ತು ನಗರದ ಪಟ್ಟಿಯಲ್ಲಿ ‘BLR-MSTC Bangalore Office’ ಅನ್ನು ಆರಿಸಿಕೊಳ್ಳಿ.
- ವಸ್ತುವಿನ ಮಾದರಿಯಲ್ಲಿ ‘Electronics’ ಎಂದು ಸರ್ಚ್ ಮಾಡಿದರೆ ಮೊಬೈಲ್ ಹಾಗೂ ಟ್ಯಾಬ್ಲೆಟ್‌ಗಳ ಹರಾಜಿನ ಪಟ್ಟಿ ಕಾಣಿಸುತ್ತದೆ.
- ಈ ಹಂತದಲ್ಲಿ ನೀವು ‘New User’ ಆಗಿ ನೋಂದಣಿ ಮಾಡಿಕೊಳ್ಳಬೇಕು. ನಿಮ್ಮ ಇಮೇಲ್ ಐಡಿ ಮತ್ತು ಫೋನ್ ನಂಬರ್ ನೀಡಿ ಓಟಿಪಿ (OTP) ಮೂಲಕ ಅದನ್ನು ದೃಢೀಕರಿಸಿ.
- ನಂತರ ನಿಮ್ಮ ವಿಳಾಸ, ಪ್ಯಾನ್ ಕಾರ್ಡ್ ಮತ್ತು ಜಿಎಸ್‌ಟಿ (ಇದ್ದರೆ ಮಾತ್ರ) ವಿವರಗಳನ್ನು ಭರ್ತಿ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಿ.
- ನೋಂದಣಿ ಯಶಸ್ವಿಯಾದ ನಂತರ ಇ-ಪಾವತಿ (e-payment) ಮೂಲಕ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಾದ ನಂತರ ನಿಮ್ಮ ಖಾತೆಯು ಹರಾಜಿನಲ್ಲಿ ಭಾಗವಹಿಸಲು ಸಕ್ರಿಯಗೊಳ್ಳುತ್ತದೆ.
ಹರಾಜಿನ ದಿನದಂದು ನೀವು ಲಾಗಿನ್ ಆಗಿ ಲೈವ್ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಬಹುದು. ಯಾರು ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಮಾಡುತ್ತಾರೋ ಅವರಿಗೆ ಆ ವಸ್ತು ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯನ್ನು ಕೂಡ ಗಮನಿಸಬಹುದು.



