ಬೆಂಗಳೂರು: ಬೆಂಗಳೂರಿನ ಅಮೇಜಾನ್ ಕಚೇರಿಯ ಗೇಟ್ ಬಳಿ ಎಲೆಕ್ಟ್ರಿಕ್ ಜಂಕ್ಷನ್ ಬಾಕ್ಸ್ ಸ್ಫೋಟಗೊಂಡು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗಲೂರು ಕ್ರಾಸ್ ಬಳಿಯಿರುವ ಅಮೇಜಾನ್ ಕಚೇರಿಯ ಗೇಟ್ ನಂಬರ್ 3ರ ಬಳಿ ಎಲೆಕ್ಟ್ರಿಕ್ ಜಂಕ್ಷನ್ ಬಾಕ್ಸ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಇಬ್ಬರು ಹಾರಿ ಬಿದ್ದಿದ್ದಾರೆ.
ಘಟನೆಯಲ್ಲಿ ಬೆಂಕಿ ತಗುಲಿ ಒಬ್ಬನಿಗೆ ಗಂಭೀರ ಗಾಯವಾಗಿದ್ದು, ಮತ್ತೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಸ್ಫೋಟದ ವೇಳೆ ನೆಲಕ್ಕೆ ಬಿದ್ದ ಪರಿಣಾಮವಾಗಿ, ಓರ್ವ ಪಾದಚಾರಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೇ ಅವರ ಕೈಗಳಿಗೆ ತೀವ್ರ ಸುಟ್ಟಗಾಯಗಳಾಗಿವೆ. ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾಳೆ ಎಂದು ವರದಿಯಾಗಿದೆ.ಸ್ಪೋಟಗೊಳ್ಳುತ್ತಿರುವ ದೃಶ್ಯ ಕಾರಿನ ಡ್ಯಾಶ್ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಸ್ಫೋಟವು ಪಾದಚಾರಿ ಮಾರ್ಗಗಳಲ್ಲಿರುವ, ಅದರಲ್ಲೂ ಶಾಲಾ ಮಕ್ಕಳು ಮತ್ತು ರಸ್ತೆಯನ್ನು ಬಳಸುವ ಇತರ ದುರ್ಬಲ ವರ್ಗದವರು ಹೆಚ್ಚಾಗಿ ಓಡಾಡುವ ಪ್ರದೇಶಗಳಲ್ಲಿರುವ ಜಂಕ್ಷನ್ ಬಾಕ್ಸ್ ಗಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ.
2022ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಟ್ರಾನ್ಸ್ಫಾರ್ಮರ್ ಸ್ಫೋಟ ಪ್ರಕರಣವನ್ನು ಈ ಘಟನೆ ನೆನಪಿಸಿದೆ. ಅಂದು ನಡೆದ ದುರ್ಘಟನೆಯಲ್ಲಿ ತಂದೆ ಮತ್ತು ಮಗಳು ಮೃತಪಟ್ಟಿದ್ದರು. ಆ ಪ್ರಕರಣದ ತನಿಖೆಯಲ್ಲಿ, ಸ್ಫೋಟಕ್ಕೂ ಮುನ್ನವೇ ಟ್ರಾನ್ಸ್ಫಾರ್ಮರ್ ಕುರಿತು ಬೆಸ್ಕಾಂಗೆ ದೂರು ಬಂದಿರುವುದು ಬೆಳಕಿಗೆ ಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ನಿರ್ಲಕ್ಷ್ಯದ ಆರೋಪ ಕೇಳಿಬಂದಿತ್ತು.
ಪಾದಚಾರಿ ಮಾರ್ಗಗಳಲ್ಲಿ ಇರಿಸಲಾದ ವಿದ್ಯುತ್ ಉಪಕರಣಗಳು ಎಷ್ಟರ ಮಟ್ಟಿಗೆ ಸುರಕ್ಷಿತ? ಅವುಗಳಿಂದ ಅಪಾಯವುಂಟಾದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಸಿಲಿಂಡರ್ ಸ್ಫೋಟಗೊಂಡು ತಾಯಿ, ಮೂರು ವರ್ಷದ ಮಗು ದುರ್ಮರಣ
ಬೆಂಗಳೂರು: ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಮ್ಡಿದ್ದ ತಾಯಿ ಹಾಗೂ ಮೂರು ವರ್ಷದ ಮಗು ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿಯ ವಿನಾಯಕ ಲೇಔಟ್ನಲ್ಲಿ ನಡೆದಿದೆ.
ರಾಯಚೂರು ಮೂಲದ ಕರಿಲಿಂಗಪ್ಪ ಅವರ ಕುಟುಂಬ ವಿನಾಯಕ ಲೇಔಟ್ನಲ್ಲಿ ಕಳೆದ 25 ವರ್ಷಗಳಿಂದ ವಾಸವಾಗಿತ್ತು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಅಗಿತ್ತಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಸೋಮವಾರ ಬೆಳಗ್ಗೆ ಸುಮಾರು 6:20ರ ವೇಳೆಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿತ್ತು. ಬಾಗಿಲು ತೆಗೆದು ಅಡುಗೆ ಮಾಡಲು ಸ್ಟೌವ್ ಹಚ್ಚಿದ ಕೂಡಲೇ ಸಿಲಿಂಡರ್ ಸ್ಫೋಟಗೊಂಡಿದೆ. ಕಳೆದ ಮೂರು ದಿನಗಳಿಂದ ಸಿಲಿಂಡರ್ನಲ್ಲಿ ಲೀಕೇಜ್ ಸಮಸ್ಯೆ ಇತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಸ್ಫೋಟದ ಪರಿಣಾಮ ಕರಿಲಿಂಗಪ್ಪ, ಅವರ ಪತ್ನಿ ಲಕ್ಷ್ಮಮ್ಮ ಹಾಗೂ ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ಎಲ್ಲರನ್ನೂ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್ನಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮಮ್ಮ ಹಾಗೂ ಅವರ ಮೂರು ವರ್ಷದ ಅವಳಿ ಮಕ್ಕಳಲ್ಲಿ ಒಂದು ಮಗು ಮೃತಪಟ್ಟಿದೆ.
ಲಕ್ಷ್ಮಮ್ಮ ಅವರಿಗೆ ಸುಮಾರು ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದರೆ, ಕರಿಲಿಂಗಪ್ಪ ಅವರಿಗೆ ಶೇ.45ರಷ್ಟು ಸುಟ್ಟ ಗಾಯಗಳಾಗಿವೆ. 11 ವರ್ಷದ ಚೈತ್ರಾ, 9 ವರ್ಷದ ಬಸವ ಹಾಗೂ ಮತ್ತೊಂದು ಮೂರು ವರ್ಷದ ಮಗು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ.

