ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಪಾರ್ಕಿಂಗ್ ವಿಚಾರದಲ್ಲಿ ಗುಡ್ನ್ಯೂಸ್ ನೀಡಿದೆ. ಡಿಸೆಂಬರ್ 26ರಿಂದಲೇ ಜಾರಿಗೆ ಬರುವಂತೆ ಟರ್ಮಿನಲ್ 1ರಲ್ಲಿನ ಉಚಿತ ಪಾರ್ಕಿಂಗ್ ಸಮಯವನ್ನು ವಿಸ್ತರಣೆ ಮಾಡಿದೆ.
ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಅನುಕೂಲಕ್ಕಾಗಿ ಟರ್ಮಿನಲ್ 1ರ ಆಗಮನ (Arrival) ವಿಭಾಗದಲ್ಲಿ ಉಚಿತ ಪಾರ್ಕಿಂಗ್ ಸಮಯವನ್ನು ವಿಸ್ತರಿಸಿದೆ.
ಡಿಸೆಂಬರ್ 26ರಿಂದಲೇ ಜಾರಿಗೆ ಬರುವಂತೆ ಟರ್ಮಿನಲ್ 1ರ ಪಿಕ್-ಅಪ್ ವಲಯಗಳಾದ P3 ಮತ್ತು P4 ನಲ್ಲಿ ಉಚಿತ ಪಾರ್ಕಿಂಗ್ ಅವಧಿಯನ್ನು 10 ರಿಂದ 15 ನಿಮಿಷಗಳಿಗೆ ಹೆಚ್ಚಿಸಲಾಗಿದೆ.
ಪ್ರಯಾಣಿಕರು ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಸುಗಮ ಪ್ರಯಾಣದ ಅನುಭವ ನೀಡುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಸಂಚಾರಕ್ಕೆ ಲಭ್ಯವಿರುವ ಸೌಲಭ್ಯಗಳು: ಪಾರ್ಕಿಂಗ್ ಪ್ರದೇಶದಿಂದ ಟರ್ಮಿನಲ್ಗೆ ಸುಲಭವಾಗಿ ತಲುಪಲು ಸೌಲಭ್ಯಗಳನ್ನು ಸಹ ಒದಗಿಸಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.
- ಶಟಲ್ ಸೇವೆ: ಪ್ರತಿ 7 ನಿಮಿಷಕ್ಕೊಮ್ಮೆ ಲಭ್ಯ.
- ಬಗ್ಗಿ ಸೇವೆ (Buggy Service): ಪ್ರಯಾಣಿಕರ ಸಹಾಯಕ್ಕಾಗಿ 10 ಬಗ್ಗಿಗಳು ಲಭ್ಯ.
- ಕಾರುಗಳು: ವಿಶೇಷವಾಗಿ ನಿಯೋಜಿಸಲಾದ 6 ಕಾರುಗಳ ತಂಡ.
ಈ ಬದಲಾವಣೆಗಳು ಶುಕ್ರವಾರದಿಂದಲೇ ಜಾರಿಗೆ ಬಂದಿದ್ದು, P3 ಮತ್ತು P4 ವಲಯಗಳನ್ನು ಬಳಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಅಲ್ಲದೆ ವಿಮಾನ ನಿಲ್ದಾಣವು ಟರ್ಮಿನಲ್ 1 ರಲ್ಲಿ ಪ್ರಯಾಣಿಕರ ಆಗಮನ ಮತ್ತು ಕರ್ಬ್ಸೈಡ್ ಪಿಕ್-ಅಪ್ ಅನುಭವವನ್ನು ನಿರಂತರವಾಗಿ ಸುಧಾರಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಬಿಐಎಎಲ್ ಹೇಳಿದೆ.
ಪ್ರಯಾಣಿಕರ ಸೇವೆಗಳನ್ನು ಪರಿಷ್ಕರಿಸಲು ಕಾರ್ಪೊರೇಟ್ ಟ್ಯಾಕ್ಸಿಗಳು (ಹಳದಿ ಬೋರ್ಡ್) ಈಗ ಅಸ್ತಿತ್ವದಲ್ಲಿರುವ P3 ಮತ್ತು P4 ಪಿಕ್-ಅಪ್ ಪಾಯಿಂಟ್ಗಳ ಜೊತೆಗೆ, T1 ನಿರ್ಗಮನದ ಡ್ರಾಪ್-ಆಫ್ ಪ್ರದೇಶದ ಮೀಸಲಾದ 5 ನೇ ಲೇನ್ನಿಂದ ಪ್ರಯಾಣಿಕರನ್ನು ಪಿಕ್-ಅಪ್ ಮಾಡಬಹುದು ಎಂದು ತಿಳಿಸಿದೆ.
ಸ್ಪಷ್ಟವಾದ ಸೂಚನಾ ಫಲಕ ಮತ್ತು ಮಾರ್ಗಸೂಚಿಗಳ ಮೂಲಕ ಪ್ರಯಾಣಿಕರು 5ನೇ ಲೇನ್ಗೆ ತಲುಪಲು ಸಹಾಯವನ್ನು ಮಾಡಲಾಗುತ್ತಿದೆ. ಇದು ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರಿಗೆ ಸುಗಮ ಆಗಮನದ ಅನುಭವ ಖಚಿತಪಡಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸಂಚಾರ ಸುಧಾರಣೆ ವಿಮಾನ ನಿಲ್ದಾಣದಲ್ಲಿ ಸಂಚಾರ ವವ್ಯವಸ್ಥೆಯನ್ನು ಕಾಪಾಡುತ್ತದೆ. ಪ್ರಯಾಣಿಕರ ಸಂಚಾರವನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಪ್ರಯಾಣಿಕರು P3/ P4 ಪಿಕ್-ಅಪ್ ಪ್ರದೇಶಗಳಿಗೆ ಸಂಚರಿಸುವ ಶಟಲ್ ಬಸ್ಗಳು (ಪ್ರತಿ 7 ನಿಮಿಷಕ್ಕೊಮ್ಮೆ), 6 ಕಾರುಗಳು ಮತ್ತು 10 ಬಗ್ಗಿಗಳ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದೆ.
ಕೆಲವು ದಿನಗಳ ಹಿಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಹೊಸ ಪಾರ್ಕಿಂಗ್ ನೀತಿಯನ್ನು ಘೋಷಣೆ ಮಾಡಿ, ಜಾರಿಗೊಳಿಸಿತ್ತು. ಕ್ಯಾಬ್ ಚಾಲಕರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಈ ನೀತಿಯನ್ನು ವಾಪಸ್ ಪಡೆಬೇಕು ಎಂದು ಆನ್ಲೈನ್ ಸಹಿ ಸಂಗ್ರಹ ಅಭಿಯಾನವನ್ನು ಸಹ ಆರಂಭಿಸಲಾಗಿತ್ತು.

