HomeKarnataka'ನಾಳೆ ಮಗಳ ಅರಿಶಿಣ ಶಾಸ್ತ್ರ, ಇಂದು ಅಂತ್ಯಕ್ರಿಯೆ'; ಕರುಳು ಹಿಂಡುತ್ತೆ ತಂದೆಯ ಕಣ್ಣೀರಿನ ಮಾತು!

‘ನಾಳೆ ಮಗಳ ಅರಿಶಿಣ ಶಾಸ್ತ್ರ, ಇಂದು ಅಂತ್ಯಕ್ರಿಯೆ’; ಕರುಳು ಹಿಂಡುತ್ತೆ ತಂದೆಯ ಕಣ್ಣೀರಿನ ಮಾತು!

ಮಗಳ ಮದುವೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳಬೇಕಿದ್ದ ತಂದೆ, ಇಂದು ಆಕೆಯ ಮೃತದೇಹದ ಮುಂದೆ ನಿಂತು ಕಣ್ಣೀರು ಹಾಕುವಂತಾಗಿದೆ. ಮನೆಯಲ್ಲಿ ಮಂಗಳವಾದ್ಯ ಮೊಳಗಬೇಕಿತ್ತು. ಸಂಬಂಧಿಕರು, ಸ್ನೇಹಿತರು ಸೇರಿ ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ ಭಾಗಿಯಾಗಬೇಕಿತ್ತು. ಆದರೆ ವಿಧಿಯ ಕ್ರೂರ ಆಟಕ್ಕೆ ಮದುವೆ ಮನೆಯ ಸಂಭ್ರಮವೇ ಕಣ್ಣೀರಿನ ಕಡಲಾಗಿ ಬದಲಾಗಿದೆ.

“ನನಗೆ ಒಬ್ಬಳೇ ಮಗಳು, ಎಲ್ಲವೂ ಮುಗಿದುಹೋಯ್ತು” ಎಂದು ತಂದೆ ನಂಜುಂಡಪ್ಪ ಕಣ್ಣೀರಿಡುತ್ತಿರುವ ದೃಶ್ಯ ಎಂಥವರ ಮನಸ್ಸನ್ನೂ ಕಲಕುವಂತಿದೆ. ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮದುವೆಯಾಗಬೇಕಿದ್ದ ಸಿಂಧೂಶ್ರೀ ಹಾಗೂ ಅವರ ಸ್ನೇಹಿತೆ ವಿದ್ಯಾ ಮೃತಪಟ್ಟಿದ್ದು, ಎರಡು ಕುಟುಂಬಗಳಲ್ಲಿ ಶೋಕ ಮಡುಗಟ್ಟಿದೆ.

ಮದುವೆಗೆ ದಿನಗಣನೆ, ಅರಿಶಿಣ ಶಾಸ್ತ್ರಕ್ಕೆ ಸಿದ್ಧತೆ!

ಸಿಂಧೂಶ್ರೀ ಅವರ ಮದುವೆ ಸಮಾರಂಭಕ್ಕೆ ಕುಟುಂಬಸ್ಥರು ಅದ್ಧೂರಿ ಸಿದ್ಧತೆ ಮಾಡಿಕೊಂಡಿದ್ದರು. ನವೆಂಬರ್ 12ರಂದು ಅರಿಶಿಣ ಶಾಸ್ತ್ರ, ಮರುದಿನ ಬಳೆ ಶಾಸ್ತ್ರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಗಳ ಮದುವೆಯನ್ನು ಸಂಭ್ರಮದಿಂದ ನೆರವೇರಿಸಬೇಕೆಂಬ ಆಸೆ ತಂದೆ-ತಾಯಿಯದ್ದಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಸಂಬಂಧಿಕರು ಹಾಗೂ ಸ್ನೇಹಿತರಿಗೆ ಹಂಚುವ ಕೆಲಸವೂ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ಸ್ನೇಹಿತರೊಬ್ಬರಿಗೆ ಆಮಂತ್ರಣ ಪತ್ರಿಕೆ ನೀಡುವುದು ಬಾಕಿ ಉಳಿದಿತ್ತು. ಅದನ್ನು ಕೊಟ್ಟು ಬರುತ್ತೇನೆ ಎಂದು ಹೇಳಿ ಸಿಂಧೂಶ್ರೀ ಮನೆಯಿಂದ ಹೊರಟಿದ್ದರು.

ಪಕ್ಕದ ಮನೆಯವರ ಬೈಕ್ ಪಡೆದು ತೆರಳಿದ್ದ ವೇಳೆ ಲಾರಿಗೆ ಸ್ಕೂಟಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಸಿಂಧೂಶ್ರೀ ಹಾಗೂ ವಿದ್ಯಾ ಮೃತಪಟ್ಟಿದ್ದಾರೆ. ಕ್ಷಣಾರ್ಧದಲ್ಲಿ ಎರಡು ಕುಟುಂಬಗಳ ಬದುಕಿನಲ್ಲಿ ಕತ್ತಲೆ ಆವರಿಸಿದೆ.

‘ನನಗೆ ಒಬ್ಬಳೇ ಮಗಳು, ಎಲ್ಲವೂ ಮುಗಿದುಹೋಯ್ತು’

ಮಗಳನ್ನು ಕಳೆದುಕೊಂಡ ತಂದೆ ನಂಜುಂಡಪ್ಪ ಅವರ ದುಃಖಕ್ಕೆ ಸಾಂತ್ವನ ಹೇಳುವುದೂ ಕಷ್ಟವಾಗಿದೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು, “ಇವತ್ತು ಅರಿಶಿಣ ಶಾಸ್ತ್ರ ಮಾಡಬೇಕಿತ್ತು. ನಾಳೆ ಬಳೆ ಶಾಸ್ತ್ರ ಇತ್ತು. ಎಲ್ಲರೂ ಚೌಟ್ರಿಗೆ ಹೋಗಬೇಕಿತ್ತು. ಆದರೆ ಈಗ ನನ್ನ ಮಗಳ ತಿಥಿ ಮಾಡುವ ಪರಿಸ್ಥಿತಿ ಬಂದಿದೆ. ನನಗೆ ಒಬ್ಬಳೇ ಮಗಳು. ಎಲ್ಲವೂ ಮುಗಿದುಹೋಯ್ತು” ಎಂದು ಕಣ್ಣೀರಿಟ್ಟಿದ್ದಾರೆ.

ಮಗಳ ಮದುವೆಗೆಂದು ಮನೆ ತುಂಬಾ ಸಂಭ್ರಮದಿಂದ ಸಿದ್ಧತೆ ಮಾಡಿಕೊಂಡಿದ್ದ ಕುಟುಂಬಕ್ಕೆ ಈಗ ಆಕೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ದುಃಸ್ಥಿತಿ ಎದುರಾಗಿದೆ. ಮಗಳ ಕೈಗೆ ಅರಿಶಿಣ ಹಚ್ಚಿ ಹರಸಬೇಕಿದ್ದ ತಂದೆ, ಆಕೆಯನ್ನು ಕಳೆದುಕೊಂಡ ನೋವಿನಲ್ಲಿ ಮುಳುಗಿದ್ದಾರೆ.

ಟ್ರಕ್ ಚಾಲಕನ ವಿರುದ್ಧ ಕುಟುಂಬಸ್ಥರ ಆಕ್ರೋಶ

ಅಪಘಾತಕ್ಕೆ ಟ್ರಕ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಯುವತಿಯರ ಸಂಬಂಧಿಕರು ಆರೋಪಿಸಿದ್ದಾರೆ. ಚಾಲಕ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿದ್ದರೆ ಇಬ್ಬರ ಜೀವ ಉಳಿಯುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದೊಳಗೆ ಸರಕು ಸಾಗಣೆ ವಾಹನಗಳ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ

ಮೃತ ಸಿಂಧೂಶ್ರೀ ಹಾಗೂ ವಿದ್ಯಾ ಅವರ ಮೃತದೇಹಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಆಸ್ಪತ್ರೆಯ ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇತ್ತ ಅಪಘಾತದ ಬಳಿಕ ಟ್ರಕ್ ಚಾಲಕನಿಗಾಗಿ ಬ್ಯಾಟರಾಯನಪುರ ಸಂಚಾರ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ಮದುವೆ ಮಂಟಪದಲ್ಲಿ ಮೊಳಗಬೇಕಿದ್ದ ಮಂಗಳವಾದ್ಯಗಳ ಬದಲಿಗೆ ಮನೆಯಲ್ಲಿ ಸಾವಿನ ಮೌನ ಆವರಿಸಿದೆ. ಮಗಳ ಮದುವೆಯ ಕನಸು ಕಂಡಿದ್ದ ತಂದೆಗೆ ಮಗಳ ಅಗಲಿಕೆಯ ನೋವು ಜೀವನಪರ್ಯಂತ ಮರೆಯಲಾಗದ ಗಾಯವಾಗಿ ಉಳಿದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular