HomeKarnatakaಭ್ರಷ್ಟಾಚಾರ ಆರೋಪ ಹೊತ್ತಿರುವ ಕುಂ.ಞಿ ಅಹ್ಮದ್ ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ: ರಾಜ್ಯಪಾಲರು, ಸಿಎಸ್ ಗೆ...

ಭ್ರಷ್ಟಾಚಾರ ಆರೋಪ ಹೊತ್ತಿರುವ ಕುಂ.ಞಿ ಅಹ್ಮದ್ ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ: ರಾಜ್ಯಪಾಲರು, ಸಿಎಸ್ ಗೆ ದೂರು

ಬೆಂಗಳೂರು: ಕರ್ನಾಟಕದ ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದ ಕುಂ.ಞಿ ಅಹ್ಮದ್ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ಅವರ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪಗಳಿದ್ದು, ಅಂತವರನ್ನು ಸಿಎಂ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಕ ಮಾಡಿರುವುದು ವಿವಾದಕ್ಕೆ ಗ್ರಾಸವಾಗಿದೆ.

ತುಮಕೂರು ಜಿಲ್ಲೆಯ ತುರುವೇಕೆರೆ ತಹಶೀಲ್ದಾರ್ ಆಗಿದ್ದ ಕುಂ.ಞಿ ಅಹಮದ್ ಅವರು ನವೆಂಬರ್ 5 ರಂದು ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ಕರ್ತವ್ಯ ವರದಿ ಮಾಡಿಕೊಂಡಿದ್ದಾರೆ. ಇವರ ವಿರುದ್ಧ ತಕ್ಷಣವೇ ಕ್ರಮ ಕೈಗೊಂಡು ಹುದ್ದೆಯಿಂದ ವಜಾಗೊಳಿಸುವಂತೆ ಮಂಡ್ಯದ ಸಾಮಾಜಿಕ ಕಾರ್ಯಕರ್ತ ಕೆ.ಆರ್. ರವೀಂದ್ರ ಅವರು ರಾಜ್ಯಪಾಲರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಂ.ಞಿ ಅಹಮದ್ ಅವರು ಈ ಹಿಂದೆ ಮಂಡ್ಯ ಹಾಗೂ ನಾಗಮಂಗಲ ತಾಲೂಕುಗಳಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹಲವು ಗಂಭೀರ ಅಕ್ರಮಗಳನ್ನ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ನಾಗಮಂಗಲ ತಾಲೂಕಿನಲ್ಲಿ ಪ್ರಕೃತಿ ವಿಕೋಪ ಹಾಗೂ ಕೋವಿಡ್-19 ಪರಿಹಾರಕ್ಕೆ ಮೀಸಲಾಗಿದ್ದ ಸುಮಾರು 3 ಕೋಟಿಗೂ ಅಧಿಕ ಮೊತ್ತದ ಸರ್ಕಾರಿ ಅನುದಾನ ದುರುಪಯೋಗವಾಗಿರುವ ಆರೋಪ.

ಪ್ರಸಿದ್ಧ ಮುಳ್ಳಕಟ್ಟಮ್ಮ ದೇವಸ್ಥಾನದ ಹುಂಡಿ ಹಣ ಹಾಗೂ ಭಕ್ತರಿಂದ ಸಂಗ್ರಹವಾಗಿದ್ದ ಅಕ್ಕಿ, ಬೆಲ್ಲ ಹಾಳಾಗಿದ್ದರೂ ಅದನ್ನು ಎಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರಕ್ಕೆ ದಾನವಾಗಿ ನೀಡಿದ ಗಂಭೀರ ಪ್ರಮಾದ.

ಮಂಡ್ಯ ತಾಲೂಕಿನಲ್ಲಿ ಮೃತ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಖಾತೆ ಬದಲಾವಣೆ ಮಾಡಿರುವ ಭೂ ಹಗರಣ. ಮಂಡ್ಯ ಜಿಲ್ಲಾಧಿಕಾರಿಗಳು ರಚಿಸಿದ್ದ ತನಿಖಾ ಸಮಿತಿಯು ಈ ಆರೋಪಗಳು ಸಾಬೀತಾಗಿವೆ ಎಂದು ವರದಿ ನೀಡಿರುವುದಾಗಿ ಉಲ್ಲೇಖಿಸಲಾಗಿದೆ.

ಭ್ರಷ್ಟಾಚಾರದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಹ್ಮದ್ ಅವರಿಗೆ ತಹಶೀಲ್ದಾರ್ ಹುದ್ದೆಯಿಂದ ಉಪವಿಭಾಗಾಧಿಕಾರಿ ಸ್ಥಾನಕ್ಕೆ ನೀಡಬೇಕಿದ್ದ ಮುಂಬಡ್ತಿಯನ್ನು ತಡೆಹಿಡಿಯಲಾಗಿತ್ತು. ಜೊತೆಗೆ ಇವರ ವಿರುದ್ಧ ನ್ಯಾಯಾಲಯದಿಂದ ಜಾಮೀನು ರಹಿತ ಬಂಧನ ವಾರಂಟ್ ಕೂಡ ಜಾರಿಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣಗಳ ತನಿಖೆಯಲ್ಲಿ ಆರೋಪಗಳು ಸಾಬೀತಾಗಿದ್ದರೂ, ಅಂತಹ ವ್ಯಕ್ತಿಯನ್ನು ಮುಖ್ಯಮಂತ್ರಿಗಳ ಸಚಿವಾಲಯದ ಮಹತ್ವದ ಹುದ್ದೆಗೆ ನೇಮಕ ಮಾಡಿರುವುದು ಆಡಳಿತ ವ್ಯವಸ್ಥೆಯ ನೈತಿಕತೆಯನ್ನು ಪ್ರಶ್ನಿಸುವಂತಿದೆ. ಕೂಡಲೇ ಕುಂ.ಞಿ ಅಹಮದ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ, ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular