ಬೆಳಿಗ್ಗೆ ಅಲಾರಾಂ ಸದ್ದು ನಿಲ್ಲುತ್ತಿದ್ದಂತೆ ಕಣ್ಣು ಸರಿಯಾಗಿ ತೆರೆಯುವ ಮುನ್ನವೇ ಕೈ ಸ್ವಯಂಚಾಲಿತವಾಗಿ ಮೊಬೈಲ್ ಫೋನ್ ಕಡೆಗೆ ಸಾಗುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಮೆಸೇಜ್‌ಗಳನ್ನು ಪರಿಶೀಲಿಸುವುದು, ಸೋಶಿಯಲ್ ಮೀಡಿಯಾ ಸ್ಕ್ರೋಲ್ ಮಾಡುವುದು, ಸುದ್ದಿಗಳು ಅಥವಾ ಆಫೀಸ್ ನೋಟಿಫಿಕೇಶನ್‌ಗಳನ್ನು ನೋಡುವುದು ಬಹುತೇಕರ ದಿನನಿತ್ಯದ ಸರಣಿಯಾಗಿಬಿಟ್ಟಿದೆ. ದಿನ ಇನ್ನು ಸರಿಯಾಗಿ ಆರಂಭವೇ ಆಗಿರುವುದಿಲ್ಲ, ಆದರೆ ಇಡೀ ದಿನದ ನೆಮ್ಮದಿಯನ್ನು ಇತರರ ಸಂದೇಶಗಳು ಅಥವಾ ಸುದ್ದಿಗಳು ನಿರ್ಧರಿಸಿಬಿಡುತ್ತವೆ.
ದಿನದ ಮೊದಲ ಕೆಲವು ನಿಮಿಷಗಳು ನೀವು ಇಡೀ ದಿನ ಯಾವುದರ ಮೇಲೆ ಗಮನ ಹರಿಸುತ್ತೀರಿ ಎಂಬುದನ್ನು ನಿರ್ಧರಿಸುತ್ತವೆ. ಆಫೀಸ್‌ನಿಂದ ಬಂದ ಒಂದು ತುರ್ತು ಮೆಸೇಜ್ ಅನಗತ್ಯ ಒತ್ತಡವನ್ನು ಸೃಷ್ಟಿಸಬಹುದು. ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಇತರರ ಜೀವನದ ಕಡೆಗೆ ಗಮನ ಸೆಳೆಯಬಹುದು. ಇಲ್ಲವೇ ಒಂದಷ್ಟು ಕೆಟ್ಟ ಸುದ್ದಿಗಳು ಬೆಳಗಿನ ಉಪಹಾರಕ್ಕೂ ಮುನ್ನವೇ ಮನಸ್ಸಿನ ನೆಮ್ಮದಿ ಕೆಡಿಸಬಹುದು. ಡಿಜಿಟಲ್ ಲೋಕದ ಈ ರೀತಿಯ ಹಸ್ತಕ್ಷೇಪವು ಏಕಾಗ್ರತೆಯನ್ನು ಭಂಗಗೊಳಿಸುತ್ತದೆ ಮತ್ತು ಮನಸ್ಸಿನ ಶಾಂತಿಯನ್ನು ಕೆಡಿಸುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
ಬೆಳಿಗ್ಗೆ ಎದ್ದ ತಕ್ಷಣ ಕನಿಷ್ಠ ಮೂವತ್ತು ನಿಮಿಷಗಳ ಕಾಲ ಮೊಬೈಲ್ ಬಳಸದಿರುವುದು ಯಾವುದೇ ಜಾದೂ ಅಲ್ಲದಿದ್ದರೂ, ಅದೊಂದು ಅತ್ಯುತ್ತಮವಾದ ವೈಯಕ್ತಿಕ ಗಡಿಯಾಗಿದೆ. ಕಣ್ಣು ತೆರೆದ ತಕ್ಷಣ ಸ್ಕ್ರೀನ್ ನೋಡುವ ಬದಲು ಆ ಸಮಯವನ್ನು ದೈನಂದಿನ ಕೆಲಸಗಳಿಗೆ ಮೀಸಲಿಡಿ. ಒಂದು ಲೋಟ ನೀರು ಕುಡಿಯುವುದು, ಕಿಟಕಿ ಬಾಗಿಲು ತೆರೆದು ನೈಸರ್ಗಿಕ ಬೆಳಕನ್ನು ಪಡೆಯುವುದು, ದೇಹವನ್ನು ಸ್ವಲ್ಪ ಸ್ಟ್ರೆಚ್ ಮಾಡುವುದು, ಕಾಫಿ ಅಥವಾ ಟೀ ಕುಡಿಯುತ್ತಾ ಪ್ರಶಾಂತವಾಗಿ ಕುಳಿತುಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ಬೆಳಗಿನ ಪ್ರಕೃತಿಯ ಬೆಳಕು ದೇಹದ ನಿದ್ರೆ ಮತ್ತು ಎಚ್ಚರದ ಚಕ್ರವನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
ಈ ಒಳ್ಳೆಯ ಅಭ್ಯಾಸವನ್ನು ಅಳವಡಿಸಿಕೊಳ್ಳಲು ಕೆಲವೊಂದು ಸರಳ ಹಂತಗಳನ್ನು ಅನುಸರಿಸಬಹುದು. ಸಾಧ್ಯವಾದಷ್ಟು ಮೊಬೈಲ್ ಫೋನ್ ಅನ್ನು ಮಲಗುವ ಹಾಸಿಗೆಯಿಂದ ದೂರವಿಡಿ. ಸಮಯಕ್ಕೆ ಸರಿಯಾಗಿ ಏಳಲು ಸಾಂಪ್ರದಾಯಿಕ ಅಲಾರಾಂ ಕ್ಲಾಕ್ ಬಳಸಿ ಅಥವಾ ಫೋನ್ ಅನ್ನು ಕೊಠಡಿಯ ಇನ್ನೊಂದು ಮೂಲೆಯಲ್ಲಿಡಿ. ಇದರಿಂದ ಫೋನ್ ಬಂದ್ ಮಾಡಲು ನೀವು ಎದ್ದು ನಿಲ್ಲಬೇಕಾಗುತ್ತದೆ. ತುರ್ತು ಕರೆಗಳನ್ನು ಸ್ವೀಕರಿಸುವುದಕ್ಕೂ ಮತ್ತು ಸುಮ್ಮನೆ ಸಮಯ ಹಾಳು ಮಾಡಲು ಸೋಶಿಯಲ್ ಮೀಡಿಯಾ ನೋಡುವುದಕ್ಕೂ ವ್ಯತ್ಯಾಸವನ್ನು ಕಾಯ್ದುಕೊಳ್ಳಿ.
ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಸಂಪೂರ್ಣವಾಗಿ ದೂರವಿಡುವುದು ಸಾಧ್ಯವಿಲ್ಲ ಮತ್ತು ಅದರ ಅಗತ್ಯವೂ ಇಲ್ಲ. ಆದರೆ ಬೆಳಗಿನ ಮೊದಲ ಗಮನವನ್ನು ಮೊಬೈಲ್‌ಗೆ ನೀಡುವ ಅಭ್ಯಾಸವನ್ನು ತಡೆಯುವುದು ಈ ನಿಯಮದ ಮುಖ್ಯ ಉದ್ದೇಶವಾಗಿದೆ. ಬೆಳಗಿನ ಮೂವತ್ತು ನಿಮಿಷಗಳ ಕಾಲ ಫೋನ್‌ನಿಂದ ದೂರವಿದ್ದರೆ ದಿನವನ್ನು ಗೊಂದಲದಿಂದ ಆರಂಭಿಸುವ ಬದಲು ಪ್ರಶಾಂತವಾಗಿ ಮತ್ತು ಯೋಜನಾಬದ್ಧವಾಗಿ ಆರಂಭಿಸಲು ಸಾಧ್ಯವಾಗುತ್ತದೆ.

