ಬೆಳಗಾವಿ: ಯುವಕನೊಬ್ಬನನ್ನು ತಲ್ವಾಅರ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಂಚ್ಯಾನಟ್ಟಿ ಗ್ರಾಮದ ರಾಮೇಶ್ವರ ನಗರದ ಹೊರವಲಯದಲ್ಲಿ ನಡೆದಿದೆ.
ರಾಜಿ ಸಂಧಾನಕ್ಕೆಂದು ಯುವಕನನ್ನು ಕರೆದ ದುರುಳರು ತಲ್ವಾರ್‌ನಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬೆಳಗಾವಿಯ ಮಜಗಾಂವ ಗ್ರಾಮದ ರಾಹುಲ್ ತಿಪ್ಪಣ್ಣ ತಳವಾರ (22) ಕೊಲೆಯಾದ ಯುವಕ.
ಈ ಪ್ರಕರಣ ಸಂಬಂಧ ಪೊಲೀಸರು ಓರ್ವ ಅಪ್ರಾಪ್ತ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಯನಗರ ಮಚ್ಚೆಯ ಸೂರಜ್ ರಾಮು ಸಿದ್ದಗೌಳಿ (26), ಯೋಗೇಶ್ ಬಾಬು ದೊಡಮನಿ (28), ಪೀರನವಾಡಿಯ ಮಂಜುನಾಥ ಸುರೇಶ್ ಮಳಕೂರ (21), ಮಜಗಾಂವದ ದೇಮಪ್ಪ ತಳವಾರ (26) ಹಾಗೂ ಅಪ್ರಾಪ್ತ ಬಾಲಕನ್ನು ಬೆಳಗಾವಿಯ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಮೇ.27ರಂದು ಹುಂಚ್ಯಾನಟ್ಟಿ ಗ್ರಾಮದ ರಾಮೇಶ್ವರ ನಗರದ ಹೊರವಲಯದಲ್ಲಿ ಗೋಡಂಬಿ ತೋಟದಲ್ಲಿ ಈಘಟನೆ ನಡೆದಿತ್ತು. ವಿರೇಶ ಹಿರೇಮಠ ಎಂಬುವವರು ಆರೋಪಿ ಸೂರಜ್ ಸಿದ್ದಗೌಳಿ ಬಳಿ ಕಾರನ್ನು 2 ಲಕ್ಷ ರೂ.ಗೆ ಖರೀದಿಸಲು ಒಪ್ಪಂದ ಮಾಡಿಕೊಂಡು 1 ಲಕ್ಷ ರೂ.ಮುಂಗಡ ಹಣ ನೀಡಿದ್ದರು. ಬಳಿಕ ಕಾರು ಸರಿಯಾಗಿಲ್ಲವೆಂದು ಮರಳಿಸಿ, 70 ಸಾವಿರ ಹಣ ವಾಪಸ್ ನೀಡುವಂತೆ ಕೇಳಿದ್ದರು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಹಣದ ವಿಚಾರವಾಗಿ ಗಲಾಟೆಯಾಗಿತ್ತು.
ಇದೆ ವಿಚಾರಕ್ಕೆ ರಾಜಿ ಸಂಧಾನಕ್ಕೆ ಹೋಗಿದ್ದ ರಾಹುಲ್ ತಳವಾರ ಹಾಗೂ ಸ್ನೇಹಿತರ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಲು 10ಕ್ಕೂ ಹೆಚ್ಚು ಜನ ಸ್ಥಳಕ್ಕೆ ಬಂದಿದ್ದರು. ರಾಜಿ ಮಾಡಿಕೊಳ್ಳಲು ರಾಹುಲ್ ಆರೋಪಿತರನ್ನು ಪಕ್ಕಕ್ಕೆ ಕರೆದು ಮಾತನಾಡಿಸಲು ಮುಂದಾದ ವೇಳೆ, ಆರೋಪಿಗಳು ಆತನ ಮೇಲೆ ತಲ್ವಾರ್‌ನಿಂದ ಹೊಡೆದಿದ್ದಾರೆ.
ರಾಹುಲ್ ಬೆನ್ನು, ತಲೆ ಹಾಗೂ ಕೈ ಭಾಗಗಳಿಗೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಹುಲ್ ನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಷೇಷ ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

