ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯನ್ನು ಅಪಹರಿಸಿದ್ದ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬೆಳಗಾವಿಯ ಅಥಣಿಯಿಂದ ಕಳೆದವಾರ ಅಪ್ರಾಪ್ತೆಯನ್ನು ಅಪಹರಿಸಿ ಕರೆತಂದಿದ್ದ. ಬಾಲಕಿಯ ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಅಥಣಿ ಪೊಲೀಸರು ಆರೋಪಿ ಬಂಧನಕ್ಕೆ ಎರಡು ವಿಶೇಷ ತಂಡ ರಚಿಸಿದ್ದರು. ಬೆಂಗಳೂರಿನಲ್ಲಿ ಆರೋಪಿ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿ ಶಾಹಿಲ್ ಕಪಿಮುಷ್ಟಿಯಲ್ಲಿದ್ದ ಅಪ್ರಾಪ್ತೆಯನ್ನು ರಕ್ಷಿಸಿದ್ದಾರೆ. ಆರೋಪಿ ಶಾಹಿಲ್ ನನ್ನು ಬಂಧಿಸಿದ್ದಾರೆ.
ಆರೋಪಿ ಶಾಹಿಲ್ ತನ್ನ ಸಂಬಂಧಿ ಹುಡುಗಿಯಿಂದ ಅಪ್ರಾಪ್ತೆಯನ್ನು ಪರಿಚಯಿಸಿಕೊಂಡಿದ್ದ. ಪಿಯುಸಿ ಓದುತ್ತಿದ್ದ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಎರಡು ಮೂರು ಬಾರಿ ಹೋಟೆಲ್ ಗೆ ಕರೆದೊಯ್ದು ನಂಬಿಕೆ ಹುಟ್ಟಿಸಿದ್ದ. ಬಳಿಕೆ ಆಕೆಯೊಂದಿಗೆ ಸುತ್ತಾಡಿ ಮೈಂಡ್ ವಾಶ್ ಮಾಡಿದ್ದ. ಮುಂದೊಂದು ದಿನ ಇಡೀ ಭಾರತವೇ ಮುಸ್ಲಿಂ ರಾಷ್ಟ್ರವಾಗಲಿದೆ ಎಂದಿದ್ದ. ಸಂಬಂಧಿ ಹುಡುಗಿಯಿಂದಲೂ ಮೈಂಡ್ ವಾಶ್ ಮಾಡಿಸಿದ್ದ. ಹಿಂದೂ ಧರ್ಮ ಬಿಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದ. ಇಸ್ಲಾಂಗೆ ಮತಾಂತರವಾದರೆ ಮದುವೆಯಾಗಿ ಚನ್ನಾಗಿ ನೋಡಿಕೊಳ್ಳುತ್ತೇನೆ ಎಂದಿದ್ದ. ಈ ರೀತಿ ಅಪ್ರಾಪ್ತೆಗೆ ಮೊಬೈಲ್ ಗೆ ಮೆಸೇಜ್ ಕೂಡ ರವಾನಿಸಿದ್ದ. ಆರೋಪಿ ಶಾಹಿಲ್ ಮಾತಿಗೆ ಅಪ್ರಾಪ್ತೆ ಮರುಳಾಗಿದ್ದಳು.
ಬಳಿಕ ಅಥಣಿಯಿಂದ ಅಪ್ರಾಪ್ತೆಯನ್ನು ಅಪಹರಿಸಿಕೊಂಡು ಬಂದಿದ್ದ. ಜನವರಿ 28ಕ್ಕೆ ವಿದ್ಯಾರ್ಥಿನಿಗೆ 18 ವರ್ಷ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಬಳಿಕ ಮದುವೆಯಾಗಲು ಪ್ಲಾನ್ ಮಾಡಿದ್ದ. ಮಗಳು ಮನೆಗೆ ವಾಪಸ್ ಆಗದಿದ್ದಾಗ ಗಾಬರಿಯಾದ ಪೋಷಕರು ಅಥಣಿ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಅಪ್ರಾಪ್ತೆಯನ್ನು ರಕ್ಷಿಸಿದ್ದಾರೆ.

