ಬೆಳಗಾವಿ: ಬೆಳಗಾವಿಯಲ್ಲಿ ಕೆಲ ದಿನಗಳ ಹಿಂದೆ ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಬ್ಲ್ಯಾಕ್ ಮೇಲ್ ಮಾಡಿದ್ದ ನಕಲಿ ಪತ್ರಕರ್ತರ ಗ್ಯಾಂಗ್ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಗ್ಯಾಂಗ್ ನ ಮತ್ತಷ್ಟು ಕರಾಳ ಮುಖ ತನಿಖೆ ವೇಳೆ ಬಯಲಾಗಿದೆ.
ನಕಲಿ ಪತ್ರಕರ್ತರ ಗ್ಯಾಂಗ್ ನ ಮೊಬೈಲ್‌ಗಳಲ್ಲಿ 100ಕ್ಕೂ ಹೆಚ್ಚು ನಗ್ನ ವಿಡಿಯೋಗಳು ಪತ್ತೆಯಾಗಿದ್ದು, ಇತರೆ ಅಧಿಕಾರಿಗಳನ್ನೂ ಟಾರ್ಗೆಟ್ ಮಾಡಿ ಲಕ್ಷಾಂತರ ರೂ. ವಸೂಲಿ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮರಾ ಇಟ್ಟು ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು 50 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಹಣ ಕೊಡದಿದ್ದರೆ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಈ ಪ್ರಕರಣದಲ್ಲಿ ಬಂಧಿತರಾದ ಸಮೀರ್ ಶೇಖ್, ಅಬ್ದುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಅವರನ್ನು ಪೊಲೀಸರು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಾಳಮಾರುತಿ ಠಾಣೆ ಪೊಲೀಸರು ಮೊಬೈಲ್ ಡೇಟಾ ರೀಟ್ರೀವ್ ಮಾಡುವ ವೇಳೆ ಮತ್ತೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಯ ಖಾಸಗಿ ವಿಡಿಯೋ ಕೂಡ ಪತ್ತೆಯಾಗಿದೆ. ಆ ಅಧಿಕಾರಿಯ ಮನೆಯಲ್ಲಿ ಕೂಡ ಹಿಡನ್ ಕ್ಯಾಮರಾ ಅಳವಡಿಸಿ ದೃಶ್ಯಗಳನ್ನು ಸೆರೆ ಹಿಡಿದು ಬ್ಲ್ಯಾಕ್‌ಮೇಲ್ ಮಾಡಿರುವುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೊಬೈಲ್‌ಗಳಲ್ಲಿ ಪತ್ತೆಯಾದ ವಿಡಿಯೋಗಳ ಹಿನ್ನೆಲೆಯಲ್ಲಿ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ತೀವ್ರಗೊಳಿಸಲಾಗಿದೆ. ಗ್ಯಾಂಗ್ ಇನ್ನಷ್ಟು ಅಧಿಕಾರಿಗಳು ಅಥವಾ ಗಣ್ಯರನ್ನು ಟಾರ್ಗೆಟ್ ಮಾಡಿರುವ ಶಂಕೆ ವ್ಯಕ್ತವಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.
ಈ ಪ್ರಕರಣದಿಂದಾಗಿ ಅಧಿಕಾರಿಗಳ ಭದ್ರತೆ ಹಾಗೂ ಖಾಸಗಿತನದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಆರೋಪಿಗಳ ವಿರುದ್ಧ ಐಟಿ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣ ದಾಖಲಿಸಲಾಗಿದ್ದು, ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

